
ಬೆಂಗಳೂರು: ಅಮೆರಿಕದ ಬಿಲಿಯನೇರ್ ಜಾರ್ಜ್ ಸೊರೊಸ್ ಸ್ಥಾಪಿಸಿದ 'ಖಾಸಗಿ ಹಣಕಾಸು ಸಂಸ್ಥೆ' ಓಪನ್ ಸೊಸೈಟಿ ಫೌಂಡೇಶನ್(OSF) ಮತ್ತು ಅದರ ಹೂಡಿಕೆ ವಿಭಾಗ EDF ವಿರುದ್ಧದ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಂಗಳವಾರ ಬೆಂಗಳೂರಿನಲ್ಲಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಓಪನ್ ಸೊಸೈಟಿ ಫೌಂಡೇಶನ್ಸ್(OSF) ಮತ್ತು ಎಕನಾಮಿಕ್ ಡೆವಲಪ್‌ಮೆಂಟ್ ಫಂಡ್(EDF)ನ ಕಚೇರಿ ಸೇರಿದಂತೆ ಎಂಟು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ಸೊರೊಸ್ ಸಂಸ್ಥೆಗಳು ವಿದೇಶಿ ನೇರ ಹೂಡಿಕೆ(FDI) ಪಡೆಯುತ್ತಿವೆ ಮತ್ತು ಕೆಲವು ಫಲಾನುಭವಿಗಳು FEMA ಮಾರ್ಗಸೂಚಿಗಳ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ.
OSF ಭಾರತದಲ್ಲಿ 1999 ರಿಂದ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ OSF ವಿದ್ಯಾರ್ಥಿವೇತನಗಳನ್ನು ನೀಡುತ್ತಿತ್ತು. ನಂತರ ಅನುದಾನ ನೀಡಿಕೆ ಕಾರ್ಯಕ್ರಮಗಳಿಗೆ ವಿಸ್ತರಿಸಿತ್ತು.
ಓಪನ್ ಸೊಸೈಟಿ ಫೌಂಡೇಶನ್ ವಿಶ್ವಾದ್ಯಂತ ನ್ಯಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ಹಾಗೂ ಸ್ವತಂತ್ರ ಮಾಧ್ಯಮಗಳನ್ನು ಮುನ್ನಡೆಸುವ ಗುಂಪುಗಳಿಗೆ ಸಹಾಯ ಮಾಡುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2021 ರಲ್ಲಿ ಭಾರತದಲ್ಲಿ 4,06,000 ಡಾಲರ್ ಖರ್ಚು ಮಾಡಿದೆ ಎಂದು ಓಎಸ್‌ಎಫ್ ಹೇಳಿತ್ತು.
Advertisement