
ಬೆಂಗಳೂರು: ನಕಲಿ ದಾಖಲೆ ತಡೆಯಲು ವರ್ಷದೊಳಗೆ 'ಲ್ಯಾಂಡ್ ಬೀಟ್ ವ್ಯವಸ್ಥೆ' ಜಾರಿಗೆ ತರಲಾಗುವುದು ಎಂದು ರಾಜ್ಯ ಸರ್ಕಾರ ಬುಧವಾರ ಹೇಳಿದೆ.
ಪರಿಷತ್ತಿನಲ್ಲಿ ಬುಧವಾರ ಜೆಡಿಎಸ್ ಎಂಎಲ್‌ಸಿ ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೇರೈಗೌಡ ಅವರು, ಸರ್ಕಾರಿ ಅಧಿಕಾರಿಗಳ ಜೊತೆ ಶಾಮೀಲಾಗಿರುವ ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದನ್ನು ತಡೆಯಲು ವರ್ಷದೊಳಗೆ 'ಲ್ಯಾಂಡ್ ಬೀಟ್ ವ್ಯವಸ್ಥೆ' ಜಾರಿಗೆ ತರಲಾಗುವುದು ಎಂದು ಹೇಳಿದರು.
ಕೆಲವು ಸರ್ಕಾರಿ ಅಧಿಕಾರಿಗಳ ಸಹಾಯದಿಂದ ಕೆಲವರು ನಕಲಿ ಭೂ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಅಧಿಕಾರಿಗಳು ಅತಿಕ್ರಮಣ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯದ ನೋಟೀಸ್‌ಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಪ್ರಕರಣಗಳು ನ್ಯಾಯಾಲಯ ನಿಂದನೆಗೆ ಆಹ್ವಾನ ನೀಡುವ ಹಂತ ತಲುಪಿದ ನಂತರ ಎಚ್ಚರಗೊಂಡಿರುವಂತೆ ನಟಿಸುತ್ತಾರೆಂದು ಹೇಳಿದರು.
ಈ ವೇಳೆ ಶರವಣ ಅವರು ಇದನ್ನು ತಡೆಯಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಅಧಿಕಾರಿಗಳ ಇಂತಹ ಅನೈತಿಕ ಕೃತ್ಯಗಳನ್ನು ಸಹಿಸಲಾಗುವುದಿಲ್ಲ. ನ್ಯಾಯಾಲಯದಲ್ಲಿನ ಹೋರಾಟದಲ್ಲಿ ಗೆಲ್ಲಲು ಮತ್ತು ಅತಿಕ್ರಮಣಗೊಂಡ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಸಹಾಯ ಮಾಡುವ ಕಾನೂನುಗಳನ್ನು ತರಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಉಪವಿಭಾಗೀಯ ಅಧಿಕಾರಿಗಳು, ತಹಶೀಲ್ದಾರ್‌ಗಳು ಮತ್ತು ವಿಶೇಷ ಜಿಲ್ಲಾ ಅಧಿಕಾರಿಗಳು ಅಕ್ರಮವಾಗಿ ಭೂಮಿ ಮಂಜೂರು ಮಾಡಿದ ಹಲವಾರು ಪ್ರಕರಣಗಳು ಇವೆ. ಅಂತಹ ಭೂ ಹಂಚಿಕೆಗಳನ್ನು ರದ್ದುಗೊಳಿಸಬೇಕು, ಇದಕ್ಕೆ ಕಾನೂನು ಹೋರಾಟದ ಅಗತ್ಯವಿದೆ. ಇದಕ್ಕಾಗಿ ಒಂದು ವರ್ಷದಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು, ಇದು ಜಿಯೋ-ಫೆನ್ಸಿಂಗ್ ಮೂಲಕ ಸರ್ಕಾರಿ ಭೂಮಿಯನ್ನು ಗುರ್ತಿಸಲು ಮತ್ತು ಅತಿಕ್ರಮಣಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ 272 ದೂರುಗಳು ದಾಖಲಾಗಿವೆ. ಯಲಹಂಕದಿಂದಲೇ 77 ದೂರುಗಳು ಬಂದಿವೆ. ಸ್ವೀಕರಿಸಿದ ಒಟ್ಟು ದೂರುಗಳ ಪೈಕಿ 132 ಎಕರೆ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ. ಶನಿವಾರ ಮತ್ತು ಭಾನುವಾರಗಳಂದೂ ಕೂಡ ಅತಿಕ್ರಮಣ ತೆರವು ಅಭಿಯಾನಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Advertisement