
ಬೆಂಗಳೂರು: ಮುಖ್ಯಮಂತ್ರಿ ಹಾಗೂ ಎಲ್ಲಾ ಶಾಸಕರಿಗೆ ವೇತನವನ್ನು ಶೇ.100 ರಷ್ಟು ಹೆಚ್ಚಳ ಮಾಡುವ ವಿಧೇಯಕ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಇದರಿಂದ ಪ್ರತಿ ವರ್ಷ ಖಜಾನೆಗೆ ರೂ. 62 ಕೋಟಿ ಹೊರೆಯಾಗಲಿದೆ ಎನ್ನಲಾಗಿದೆ.
ಚರ್ಚೆ ಇಲ್ಲದೆ ಮಸೂದೆ ಅಂಗೀಕಾರ: ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಬಿಜೆಪಿ ಸದಸ್ಯರು ಇಂದು ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ ಯಾವುದೇ ಚರ್ಚೆ ಇಲ್ಲದೆ ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025’ ಮತ್ತು ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಅಂಗೀಕಾರಗೊಂಡವು.
ಜೀವನ ವೆಚ್ಚದಲ್ಲಿ ಹೆಚ್ಚಳದ ಸಮರ್ಥನೆ: ಜೀವನ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಸಿಎಂ, ಸಚಿವರು, ರಾಜ್ಯ ಸಚಿವರು ಮತ್ತು ಉಪ ಮಂತ್ರಿಗಳ ವೇತನ ಮತ್ತು ಭತ್ಯೆಗಳನ್ನು ದೀರ್ಘಕಾಲದಿಂದ ಪರಿಷ್ಕರಿಸಲಾಗಿಲ್ಲ. ಸಂಸದೀಯ ಪದಾಧಿಕಾರಿಗಳು ಮತ್ತು ಶಾಸಕರ ವೇತನ ಮತ್ತು ಭತ್ಯೆಯಲ್ಲಿನ ಹೆಚ್ಚಳವನ್ನು ಸಮರ್ಥಿಸಲು "ಜೀವನ ವೆಚ್ಚದಲ್ಲಿ ಗಣನೀಯ ಹೆಚ್ಚಳ" ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಪರಿಷ್ಕೃತ ವೇತನ, ಭತ್ಯೆ ಇಂತಿದೆ:
ಪ್ರಸ್ತುತ ಮುಖ್ಯಮಂತ್ರಿಗಳ ವೇತನ 75,000 ರೂಪಾಯಿ ಇದ್ದು, ವಿಧಾನಪರಿಷತ್ತಿನಲ್ಲೂ ಮಸೂದೆ ಅಂಗೀಕಾರವಾದಲ್ಲಿ ರೂ. 1.5 ಲಕ್ಷ ರೂಪಾಯಿ ಆಗಲಿದೆ. ಮುಖ್ಯಮಂತ್ರಿ ಅತಿಥಿ ಭತ್ಯೆ 4.5 ಲಕ್ಷ ರೂಪಾಯಿ ಇದ್ದು, ಅದು 5 ಲಕ್ಷ ರೂಪಾಯಿ ಆಗಲಿದೆ.
ಸಭಾಧ್ಯಕ್ಷ, ಸಭಾಪತಿ ವೇತನ ಈಗ 75000 ರೂಪಾಯಿ ಇದ್ದು, ಪ್ರಸ್ತಾವಿತ ಹೆಚ್ಚಳದ ಪ್ರಕಾರ 1.25 ಲಕ್ಷ ರೂಪಾಯಿ ಆಗಿಲಿದೆ. ಇದೇ ರೀತಿ ಸಭಾಧ್ಯಕ್ಷ, ಸಭಾಪತಿ ಅತಿಥಿ ಭತ್ಯೆ 4 ಲಕ್ಷ ರೂಪಾಯಿ ಇರೋದು 5 ಲಕ್ಷ ರೂಪಾಯಿ ಆಗಲಿದೆ.
ಉಪ ಸಭಾಧ್ಯಕ್ಷ, ಉಪ ಸಭಾಪತಿಗಳ ವೇತನ 60,000 ರೂಪಾಯಿ ಇದ್ದು, 80,000 ರೂಪಾಯಿ ಆಗಲಿದೆ. ಉಪ ಸಭಾಧ್ಯಕ್ಷ, ಉಪ ಸಭಾಪತಿಗಳ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಆಗಲಿದೆ. ವಿಧಾನ ಪರಿಷತ್ ಮತ್ತು ವಿಧಾನ ಸಭೆ ವಿಪಕ್ಷ ನಾಯಕರ ವೇತನ 60,000 ರೂಪಾಯಿ ಇದ್ದು, ಅದು 80,000 ರೂಪಾಯಿ ಆಗಲಿದೆ.
ಮುಖ್ಯ ಸಚೇತಕರ ವೇತನ 50,000 ರೂಪಾಯಿ ಇದ್ದು, 70,000 ರೂಪಾಯಿ ಆಗಲಿದೆ. ಮುಖ್ಯ ಸಚೇತಕರ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಅಗಲಿದೆ. ವಿಪಕ್ಷ ಮುಖ್ಯ ಸಚೇತಕರ ಅತಿಥಿ ಭತ್ಯೆ 2.5 ಲಕ್ಷ ರೂಪಾಯ ಇದ್ದು, 3 ಲಕ್ಷ ರೂಪಾಯಿ ಅಗಲಿದೆ. ಅದೇ ರೀತಿ. ಸಚಿವರ ವೇತನ 60,000 ರೂಪಾಯಿ ಇದ್ದು, ಇದು 1.25 ಲಕ್ಷ ರೂಪಾಯಿ ಆಗಲಿದೆ. ಸಚಿವರ ಅತಿಥಿ ಭತ್ಯೆ 4.5 ಲಕ್ಷ ರೂಪಾಯಿ ಇರುವುದು 5 ಲಕ್ಷ ರೂಪಾಯಿ ಆಗಲಿದೆ.
ಸಚಿವರಿಗೆ ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂಪಾಯಿ ಇದ್ದು, 2.5 ಲಕ್ಷ ರೂಪಾಯಿ ಆಗಲಿದೆ. ರಾಜ್ಯ ಸಚಿವರ ವೇತನ 50,000 ರೂಪಾಯಿ ಇದ್ದು, 75,000 ರೂಪಾಯಿ ಆಗಲಿದೆ. ರಾಜ್ಯ ಸಚಿವರ ಮನೆ ಬಾಡಿಗೆ ಭತ್ಯೆ 1.2 ಲಕ್ಷ ರೂ ಇದ್ದು 2 ಲಕ್ಷ ರೂಪಾಯಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.
Advertisement