
ಬೆಂಗಳೂರು: ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಜಲಶಕ್ತಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತಾರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ದೇಶಾದ್ಯಂತ ಒಂದೇ ನ್ಯಾಯ ಮಂಡಳಿ ಸ್ಥಾಪನೆ ಮಾಡಿ, ಆರು ತಿಂಗಳಲ್ಲಿ ವಿವಾದ ಇತ್ಯರ್ಥ ಪಡಿಸಬೇಕು ಎಂದು ಸಲಹೆ ನೀಡಿದರು.
ಮೇಕೆದಾಟು ಜಲಾಶಯ ಯೋಜನೆ ಕರ್ನಾಟಕದ ಹಕ್ಕು. ಆರು ವರ್ಷಗಳಿಂದ ಅನುಮತಿ ಸಿಗದೆ ಯೋಜನೆ ಬಾಕಿ ಉಳಿದಿದೆ. ಇದನ್ನು ಪರಿಹರಿಸಲು ಕೇಂದ್ರ ಸರ್ಕಾರವು ಕ್ರಮವನ್ನು ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಲಸಂಪನ್ಮೂಲ ಆಯೋಗ ಮತ್ತು ಕೇಂದ್ರ ಜಲ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿದರು.
ಮಹದಾಯಿ ಯೋಜನೆಗೆ ನ್ಯಾಯಮಂಡಳಿ ತೀರ್ಪು ನೀಡಿದೆ, ಆದರೆ, ಪರಿಸರ ಇಲಾಖೆ ಅನುಮತಿ ನೀಡಿಲ್ಲ, ಇದರಿಂದ ಕರ್ನಾಟಕ ರಾಜ್ಯ ಸಮಸ್ಯೆ ಎದುರಿಸುವಂತಾಗಿದೆ. ಗೋದಾವರಿ, ಮಹಾನದಿ ಕೃಷ್ಣಾ ಕಾವೇರಿ ಜೋಡಣೆಯ ಯೋಜನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಈ ವಿಚಾರದಲ್ಲಿ ಎನ್ಡಬ್ಲುಡಿಎಗೆ ಸೂಕ್ತ ನಿರ್ದೇಶನ ನೀಡಿ ಕರ್ನಾಟಕದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ನಾವು ಮಧ್ಯಂತರ ರಾಜ್ಯವಾಗಿದ್ದು, ಮೇಲಿನವರು ನೀರು ಕೊಡುವುದಿಲ್ಲ. ಕೆಳಗಿನವರು ನೀರು ಬೇಡುತ್ತಾರೆ. ನಮ್ಮ ಪರಿಸ್ಥಿತಿ ಏನು ಮಾಡಬೇಕು. 2010 ರಲ್ಲಿ ಕೃಷ್ಣಾ ನ್ಯಾಯಮಂಡಳಿ ಆದೇಶ ನೀಡಲಾಗಿದೆ. ಈಗ 2025ಕ್ಕೆ ಬಂದಿದ್ದೇವೆ. ಈಗಲ್ಲೂ ನೋಟಿಫಿಕೇಶನ್ ಆಗಿಲ್ಲ. ಅಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಳ ಮಾಡುವುದು ನಮ್ಮ ಪ್ರಸ್ತಾವನೆ ಅಲ್ಲ, ಅದು ನಮ್ಮ ಹಕ್ಕು. ಅದು ನ್ಯಾಯಮಂಡಳಿ ತೀರ್ಮಾನವಾಗಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಿಲ್ಲ. ಆಲಮಟ್ಟಿ ಹೆಚ್ಚಳದಿಂದ ತೆಲಂಗಾಣ, ಆಂಧ್ರ ಪ್ರದೇಶಕ್ಕೂ ಅನುಕೂಲವಾಗಲಿದೆ. ಆಂಧ್ರ ಹಾಗೂ ತೆಲಂಗಾಣ ನಡುವೆ ನೀರು ಹಂಚಿಕೆಯ ಸಮಸ್ಯೆ ಉದ್ಭವವಾಗಿದೆ. ಅದನ್ನು ಅವರು ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು.
Advertisement