
ಬೆಂಗಳೂರು: ಬೆಂಗಳೂರು ಅರಮನೆ ಮೈದಾನ ಪ್ರದೇಶದ 472 ಎಕರೆ 16 ಗುಂಟೆ ಜಮೀನು ಬಳಕೆ ಮತ್ತು ನಿಯಂತ್ರಣ ಅಧಿಕಾರವನ್ನು ರಾಜ್ಯ ಸರ್ಕಾರದ ಬಳಿಯೇ ಇಟ್ಟುಕೊಳ್ಳುವ ಉದ್ದೇಶದ ‘ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025ಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಇಂದು ಅಂಗೀಕಾರ ದೊರೆಯಿತು.
ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಮೈಸೂರು ರಾಜಮನೆತನದ ವಾರಸುದಾರರಿಗೆ 3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಆದರೆ, ಅಷ್ಟು ದುಬಾರಿ ಮೌಲ್ಯದ ಟಿಡಿಆರ್ ನೀಡಲು ಜನವರಿ 24 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರಾಕರಿಸಲಾಗಿತ್ತು. ತದನಂತರ ಜನವರಿ 29 ರಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು.
ಬೆಂಗಳೂರು ಅರಮನೆ ಮೈದಾನಕ್ಕೆ ಟಿಡಿಆರ್ ನೀಡುವುದರಿಂದ ರಾಜ್ಯದ ಹಿತದೃಷ್ಟಿಗೆ ಸರಿಹೊಂದಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಬೆಂಗಳೂರು ಅರಮನೆ ಮೈದಾನದ 1217.41 ಚದರ ಮೀಟರ್ ಪ್ರದೇಶದಲ್ಲಿ 15.39 ಎಕರೆ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಬಳಸಲು ಉದ್ದೇಶಿಸಲಾಗಿದೆ.
ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1996 ರ ಅನುಸಾರವಾಗಿ ಸರ್ಕಾರವು ಹೊಂದಿರುವ ಭೂಮಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಸೆಕ್ಷನ್ 14 ಬಿ ಅಡಿಯಲ್ಲಿ ಯಾವುದೇ ಟಿಡಿಆರ್ ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.
Advertisement