ವಿಧಾನಸಭೆ: 18 ಬಿಜೆಪಿ ಶಾಸಕರ ಅಮಾನತು ಬೆನ್ನಲ್ಲೇ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲು ಮಸೂದೆ ಅಂಗೀಕಾರ

ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ‘ಅಸಂವಿಧಾನಿಕ ದುಸ್ಸಾಹಸ’ ಎಂದು ಬಿಜೆಪಿ ಬಣ್ಣಿಸಿದೆ.
Karnataka Assembly
ವಿಧಾನಸಭೆ
Updated on

ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡುವೆ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ‌ ನೀಡುವ ಮಸೂದೆ ಯಾವುದೇ ಚರ್ಚೆ ಇಲ್ಲದೆ ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ಬಿಜೆಪಿ ಸದಸ್ಯರು ವಿಧಾನಸಭೆಯ ಬಾವಿಗಿಳಿದು,ಸ್ಪೀಕರ್ ಪೀಠದತ್ತ ಮಸೂದೆ ಪ್ರತಿಗಳನ್ನು ಹರಿದು ಎಸೆದರು. ಇದರಿಂದ ತೀವ್ರ ಅಸಮಾಧಾನಗೊಂಡ ಸ್ಪೀಕರ್ ಯು. ಟಿ. ಖಾದರ್ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಪಡಿಸಿ, ಅವರನ್ನು ವಿಧಾನಸಭೆಯಿಂದ ಹೊರಹಾಕಲು ಮಾರ್ಷಲ್ ಗಳಿಗೆ ನಿರ್ದೇಶಿಸಿದರು.

ಈ ಮಸೂದೆ ಅಸಂವಿಧಾನಿಕವಾದದ್ದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷ ಸದಸ್ಯರ ಪ್ರತಿಭಟನೆ, ವಿರೋಧ, ಗದ್ದಲದ ನಡುವೆ ಮುಸ್ಲಿಂರಿಗೆ 2 ಕೋಟಿ ರೂ. ವರೆಗಿನ ಸರ್ಕಾರಿ ಗುತ್ತಿಗೆ ಕಾಮಗಾರಿಗಳು ಹಾಗೂ ₹1 ಕೋಟಿ ವರೆಗೆ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಮೀಸಲಾತಿ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ( ತಿದ್ದುಪಡಿ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.

ಮಾರ್ಚ್ 7 ರಂದು ಸಿದ್ದರಾಮಯ್ಯ ಮಂಡಿಸಿದ 2025-26ರ ಬಜೆಟ್ ನಲ್ಲಿ ಇದನ್ನು ಘೋಷಿಸಲಾಗಿತ್ತು.

ಪ್ರಸ್ತುತ ಕರ್ನಾಟಕದಲ್ಲಿ ಸಿವಿಲ್ ಕಾಮಗಾರಿ ಗುತ್ತಿಗೆಯಲ್ಲಿ ಎಸ್‌ಸಿ/ಎಸ್‌ಟಿಗಳಿಗೆ (ಶೇ. 24) ಒಬಿಸಿ ಗುತ್ತಿಗೆದಾರರಿಗೆ ಸೇರಿದ ಪ್ರವರ್ಗ-1 (ಶೇ. 4) ಮತ್ತು ಪ್ರವರ್ಗ-2ಎ (ಶೇ. 15) ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಮುಸ್ಲಿಂರಿಗೆ ಪ್ರವರ್ಗ 2ಬಿ ಅಡಿಯಲ್ಲಿ ಶೇ. 4 ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯಿದೆ.

ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ‘ಅಸಂವಿಧಾನಿಕ ದುಸ್ಸಾಹಸ’ ಎಂದು ಬಣ್ಣಿಸಿರುವ ಬಿಜೆಪಿ, ಇದನ್ನು ಹಿಂದಕ್ಕೆ ಪಡೆಯುವವರೆಗೂ ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಸೇರಿದಂತೆ ಎಲ್ಲ ಹಂತಗಳಲ್ಲಿ ಹೋರಾಟ ಮಾಡುವುದಾಗಿ ಹೇಳಿದೆ.

ಹಿಂದುಳಿದ ವರ್ಗಗಳ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ನಿರ್ಮಾಣ ಕಾರ್ಯಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿ ಈ ಮಸೂದೆಯ ಉದ್ದೇಶವಾಗಿದೆ. ಸರ್ಕಾರಿ ಕಾಮಗಾರಿಗಳಲ್ಲಿ ರೂ.2 ಕೋಟಿಗಿಂತ ಹೆಚ್ಚಿನ ಮೊತ್ತದ ಗುತ್ತಿಗೆ ನೀಡುವುದಿಲ್ಲ ಎಂದು ಹೇಳಲಾಗಿದೆ.

Karnataka Assembly
ಪೇಪರ್ ಹರಿದು ಸ್ಪೀಕರ್ ಪೀಠದತ್ತ ಎಸೆದ ಪ್ರತಿಪಕ್ಷಗಳ ಸದಸ್ಯರು: ಹನಿಟ್ರ್ಯಾಪ್ ಗದ್ದಲದ ನಡುವೆಯೇ ಶಾಸಕರ ವೇತನ ಹೆಚ್ಚಳಕ್ಕೆ ಅಂಗೀಕಾರ

ಅಧಿಸೂಚಿತ ಇಲಾಖೆಗಳಲ್ಲಿ ನಿರ್ಮಾಣ ಕಾಮಗಾರಿ ಹೊರತುಪಡಿಸಿ ₹1 ಕೋಟಿ ವರೆಗೆ ಸರಕು ಮತ್ತು ಸೇವೆಗಳ ಪೂರೈಕೆಯ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳು ಅಥವಾ ಹಿಂದುಳಿದ ವರ್ಗಗಳ ನಡುವೆ ಮೀಸಲಾತಿಯನ್ನು ಮಸೂದೆಯು ಒದಗಿಸುತ್ತದೆ. ಅಂತಹ ಟೆಂಡರ್ ನಲ್ಲಿ ಪರಿಶಿಷ್ಟ ಸಮುದಾಯದವರಿಗೆ ಶೇ. 17.5, ಪರಿಶಿಷ್ಟ ಪಂಗಡಕ್ಕೆ ಶೇ. 6.95, ಹಿಂದುಳಿದ ವರ್ಗದ ಪ್ರವರ್ಗ1ಕ್ಕೆ ಶೇ. 4, ಪ್ರವರ್ಗ 2 ಎಗೆ ಶೇ. 15 ಮತ್ತು ಪ್ರವರ್ಗ 2 ಬಿ (ಮುಸ್ಲಿಮರು) ಗೆ ಶೇಕಡಾ 4 ರಷ್ಟು ಮೀಸಲಾತಿ ಒದಗಿಸಲಾಗುತ್ತದೆ ಎಂದು ಮಸೂದೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com