ರಾಜ್ಯದಲ್ಲಿ ನಕ್ಸಲರ ಹತ್ತಿಕ್ಕಲು 201 ಕೋಟಿ ರೂ ಖರ್ಚು: ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ನಕ್ಸಲರನ್ನು ಹತ್ತಿಕ್ಕಲು 2008 ರಿಂದ ಇಲ್ಲಿಯವರೆಗೆ 201 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ.
Home Minister Dr. G. Parameshwar
ಗೃಹ ಸಚಿವ ಡಾ. ಜಿ. ಪರಮೇಶ್ವರ್
Updated on

ಬೆಂಗಳೂರು: ರಾಜ್ಯದಲ್ಲಿ ನಕ್ಸಲರನ್ನು ಹತ್ತಿಕ್ಕಲು 2008 ರಿಂದ ಇಲ್ಲಿಯವರೆಗೆ 201 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

ನಕ್ಸಲಿಸಂ ನಿಗ್ರಹಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮತ್ತು ಮಾಡಿದ ವೆಚ್ಚಗಳ ಕುರಿತು ಗುರುವಾರ ಪರಿಷತ್ತಿನಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್ ಅವರು ಉತ್ತರಿಸದರು.

ಕರ್ನಾಟಕದಲ್ಲಿ ನಕ್ಸಲರನ್ನು ಹತ್ತಿಕ್ಕಲು 2008 ರಿಂದ ಇಲ್ಲಿಯವರೆಗೆ 201 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಇದರಲ್ಲಿ, 2018 ರಿಂದ ಫೆಬ್ರವರಿ 2025 ರವರೆಗೆ ವೇತನಕ್ಕಾಗಿ 150 ಕೋಟಿ ರೂ. ಮತ್ತು 2008 ರಿಂದ ಮಾರ್ಚ್ 4, 2025 ರವರೆಗೆ ವೇತನೇತರ ವೆಚ್ಚಗಳಿಗಾಗಿ 51.31 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಕ್ಸಲೀಯರ ಹೋರಾಟ ಹತ್ತಿಕ್ಕಲು 2005ರಲ್ಲಿ ರಾಜ್ಯ ನಕ್ಸಲ್ ನಿಗ್ರಹ ಪಡೆ ಸ್ಥಾಪಿಸಲಾಗಿತ್ತು. ಉಡುಪಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ನಕ್ಸಲ್ ಪ್ರಭಾವಿ ಸ್ಥಳಗಳಲ್ಲಿ 16 ಕಡೆಗಳಲ್ಲಿ ಕ್ಯಾಂಪ್​ಗಳನ್ನು ತೆರೆದು ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನಕ್ಸಲ್ ನಿಗ್ರಹಕ್ಕಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೇತನ ರೂಪವಾಗಿ 2018ರಿಂದ ಕಳೆದ ಫೆಬ್ರವರಿ ಅಂತ್ಯಕ್ಕೆ 150 ಕೋಟಿ ರೂ. ಹಾಗೂ 2008ರಿಂದ ಈವರೆಗೂ 51 ಕೋಟಿ ರೂ. ವೇತನಯೇತರ ವೆಚ್ಚ ಸೇರಿದಂತೆ ಒಟ್ಟು 201 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ರಾಜ್ಯಮಟ್ಟದಲ್ಲಿ ಶರಣಾಗತಿ ಹಾಗೂ ಪುನರ್ ವಸತಿ ಯೋಜನೆಯಡಿ ನೀಡಲಾಗುತ್ತಿದ್ದು, ಪ್ರೋತ್ಸಾಹ ಧನವನ್ನು ಪರಿಷ್ಕರಿಸಲಾಗಿತ್ತು. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಶರಣಾಗತಿ ಸಮಿತಿ ರಚಿಸಲಾಗಿತ್ತು. ಸಮಾಜದ ಮುಖ್ಯವಾಹಿನಿ ಕರೆತರುವ ಸಂಬಂಧ ಕಳೆದ ವರ್ಷ ಸರ್ಕಾರವು ಶರಣಾಗತಿಯಾದರೆ ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ಘೋಷಿಸಿತ್ತು. ಇದರಂತೆ ಕಳೆದ ವರ್ಷ ಏಳು ಮಂದಿ ನಕ್ಸಲೀಯರು ಶರಣಾಗಿದ್ದಾರೆ. ಈ ಮೂಲಕ ನಕ್ಸಲ್ ಮುಕ್ತ ಮಾಡಲಾಗಿದೆ. ರಚಿಸಲಾಗಿದ್ದ ನಕ್ಸಲ್ ನಿಗ್ರಹಪಡೆಯನ್ನು ವಿಸರ್ಜಿಸಲಾಗಿದೆ ಎಂದರು.

Home Minister Dr. G. Parameshwar
ಪೊಲೀಸ್ ಇಲಾಖೆಯಲ್ಲಿ 18 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಗೃಹ ಸಚಿವ ಡಾ ಜಿ ಪರಮೇಶ್ವರ್

ಈ ವೇಳೆ ಮಧ್ಯಪ್ರವೇಶಿಸಿದ ಸಿ.ಟಿ.ರವಿ, ನಕ್ಸಲ್ ಮುಕ್ತವೆಂದು ಘೋಷಿಸಿದ್ದರೂ ಭವಿಷ್ಯದಲ್ಲಿ ಕರ್ನಾಟಕವನ್ನ ಸ್ಲೀಪರ್ ಸೆಲ್ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಈ ಆಯಾಮದಲ್ಲಿಯೂ ಸರ್ಕಾರ ಆಲೋಚಿಸಿಬೇಕಿದೆ ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ನಕ್ಸಲೀಯರು ಶರಣಾಗಿದ್ದಾರೆ. ಆದರೂ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಪತ್ತೆಹಚ್ಚಲು ನಿಗ್ರಹಪಡೆಯ ಗುಪ್ತ ಮಾಹಿತಿ ತಂಡವು ತಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ. ಕೇರಳ, ತಮಿಳುನಾಡು ಹಾಗೂ ಒಡಿಶಾದಿಂದ ರಾಜ್ಯಕ್ಕೆ ನುಸುಳುವ ನಕ್ಸಲೀಯರ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ ಎಂದು ವಿವರಿಸಿದರು.

ಮಂಗಳೂರು ಹೊಸ ಕೇಂದ್ರ ಕಾರಾಗೃಹಕ್ಕೆ ಜೈಲು ಸ್ಥಳಾಂತರ

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಪ್ರಶ್ನೆಗೆ ಉತ್ತರಿಸಿ, ಮಂಗಳೂರಿನ ಹೊರವಲಯದಲ್ಲಿ ಹೊಸ ಕೇಂದ್ರ ಕಾರಾಗೃಹ ನಿರ್ಮಾಣವಾಗುತ್ತಿದ್ದು, ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಎರಡನೇ ಹಂತದ ಕಾಮಗಾರಿ ಕೈಗೊಂಡಿದ್ದು, ಆದಷ್ಟು ಬೇಗ ಪೂರ್ಣಗೊಳಿಸಿ, ಹಾಲಿ ಜೈಲನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.

ಹಾಲಿ ಇರುವ ಜಿಲ್ಲಾ ಕಾರಾಗೃಹ ಹಳೆಯದಾಗಿದ್ದು, ಕಾಂಪೌಂಡ್ ಕುಸಿದಿದೆ. ಅಲ್ಲದೇ, ನಗರದ ಮಧ್ಯಭಾಗದಲ್ಲಿ ಇರುವುದರಿಂದ ಜೈಲಿನಲ್ಲಿ ಅಕ್ರಮ ಚಟುವಟಿಕೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ 2018ರಲ್ಲಿ ಬಂಟ್ವಾಳ ತಾಲೂಕಿನ ಚೇಳೂರು ಹಾಗೂ ಕುರ್ನಾಡು ಗ್ರಾಮದಲ್ಲಿ 63 ಎಕರೆ ಜಾಗ ಖರೀದಿಸಲಾಗಿತ್ತು. ಕೇಂದ್ರ ಕಾರಾಗೃಹ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 110 ಕೋಟಿ ರೂ. ಮಂಜೂರು ಮಾಡಿ, 2018ರಲ್ಲಿ ಕೈಗೊಂಡಿದ್ದ ಮೊದಲ ಹಂತದ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿಗಳಿಗೆ 195 ಕೋಟಿ ರೂ. ಆಗಲಿದ್ದು, ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಲಭ್ಯತೆ ಆಧರಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

Home Minister Dr. G. Parameshwar
Honeytrap: ರಾಜ್ಯದಲ್ಲಿ ಹನಿಟ್ರ್ಯಾಪ್ ಜಾಲ; ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ- ಡಾ. ಜಿ. ಪರಮೇಶ್ವರ್

ಜೈಲಿನಲ್ಲಿ ಮೊಬೈಲ್ ಬಳಕೆ ಹತ್ತಿಕ್ಕಲು ಹೈರೆಸ್ಯೂಲೇಷನ್ ಜಾಮರ್ ಅಳವಡಿಸಲಾಗುತ್ತಿದೆ. ಜೈಲಿನ ಸುತ್ತಮುತ್ತಲಿನ ನಿವಾಸಿಗಳಿಗೆ ನೆಟ್​​ವರ್ಕ್ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ಜೈಲಿಗೆ ಮಾತ್ರ ಜಾಮರ್ ಸೀಮಿತ ಬಳಕೆ ರೀತಿ ಮಾಡಿಕೊಡಲು ತಾಂತ್ರಿಕ ತಂಡಕ್ಕೆ ಮನವಿ ಮಾಡಲಾಗಿದೆ. ಬಿಗಿ ತಪಾಸಣೆಗಾಗಿ ಜೈಲು ವಾರ್ಡನ್​ಗಳ ಬದಲು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು​ ತಿಳಿಸಿದರು.

ವಿಷಾಹಾರ ಸೇವಿಸಿ ಇತ್ತೀಚೆಗೆ 59 ಮಂದಿ ಬಂಧಿಗಳು ಅಸ್ವಸ್ಥರಾಗಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಂಧಿಗಳ ಆರೋಗ್ಯ ದೃಷ್ಟಿಯಿಂದ ವೈದ್ಯಾಧಿಕಾರಿಗಳಿಗೆ ರಾತ್ರಿ ಪಾಳಿಯಲ್ಲಿಯೂ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಉಟೋಪಚಾರದ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ ಎಂದರು.

ರಾಜ್ಯದಲ್ಲಿ 1 ಲಕ್ಷ ಜನಸಂಖ್ಯೆಗೆ 165 ಮಂದಿ ಪೊಲೀಸ್

ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್​​ಮೆಂಟ್ ಪ್ರಕಾರ 1 ಲಕ್ಷ ಜನಸಂಖ್ಯೆಗೆ ಸರಾಸರಿ 195 ಮಂದಿ ಪೊಲೀಸರು ಇರಬೇಕು. ಆದರೆ, ರಾಜ್ಯದಲ್ಲಿ ಕೇವಲ 165 ಮಂದಿ ಇದ್ದಾರೆ. ಮುಂದಿನ ದಿನಗಳಲ್ಲಿ ಪಿಎಸ್ಐ, ಕಾನ್ಸ್​​ಟೇಬಲ್​​ಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು, ವ್ಯತ್ಯಾಸದ ಪ್ರಮಾಣ ಸರಿದೂಗಿಸಲಾಗುವುದು ಎಂದು ಸಚಿವರು ಇದೇ ವೇಳೆ ಹೇಳಿದರು.

ಕಾಂಗ್ರೆಸ್​​ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ 1 ಲಕ್ಷ ಜನಸಂಖ್ಯೆಗೆ ರಾಜ್ಯದಲ್ಲಿ 165 ಮಂದಿ ಪೊಲೀಸರಿದ್ದು, ಬೇರೆ ರಾಜ್ಯಗಳಿಗೆ ತಾಳೆ ಹಾಕಿದರೆ ಸರಾಸರಿ ಪ್ರಮಾಣದಲ್ಲಿ ನಾವು ಸನಿಹದಲ್ಲಿದ್ದೇವೆ. ಒಂದು ಲಕ್ಷ ಜನಸಂಖ್ಯೆಗೆ ಮಧ್ಯಪ್ರದೇಶದಲ್ಲಿ 121, ಮಹಾರಾಷ್ಟ್ರ 136, ರಾಜಸ್ತಾನ 118, ತಮಿಳುನಾಡು 159 ಹಾಗೂ ಬಿಹಾರದಲ್ಲಿ 81 ಮಂದಿ ಪೊಲೀಸರಿದ್ದಾರೆ ಎಂದು ಹೇಳಿದರು.

ಇಲಾಖೆಯಲ್ಲಿ ಈಗಾಗಲೇ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಯಲ್ಲಿ ಹಗರಣವಾಗಿದ್ದ 565 ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದ್ದು, ಅರ್ಹ ಪಿಎಸ್ಐಗಳು ಪೊಲೀಸ್ ತರಬೇತಿ ಪಡೆಯುತ್ತಿದ್ದಾರೆ. 402 ಮಂದಿ ಪಿಎಸ್ಐಗಳ ಸಿಂಧುತ್ವ ಪರಿಶೀಲನೆ ನಡೆಸಲಾಗುತ್ತಿದೆ. ಸಿವಿಲ್ ಹಾಗೂ ಸಶಸ್ತ್ರ ಮೀಸಲು ಪಡೆದ ಕಾನ್ಸ್​ಟೇಬಲ್​​ಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com