
ಬೆಂಗಳೂರು: ಇಂದಿನಿಂದ 2025-26ನೇ ಸಾಲಿನ SSLC ವಾರ್ಷಿಕ ಪರೀಕ್ಷೆಗಳು ರಾಜ್ಯದಲ್ಲಿ ಆರಂಭಗೊಳ್ಳಲಿವೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದ 2,818 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಯ ಮೊದಲ ದಿನವಾದ ಇಂದು ಪ್ರಥಮ ಭಾಷೆಯಾಗಿ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತ ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಲು ಪರೀಕ್ಷೆ ಬರೆಯಲಿದ್ದಾರೆ. ಕಳೆದ ಬಾರಿಯಂತೆ ಈ ಬಾರೀಯೂ ಸಿ.ಸಿ,ಕ್ಯಾಮೆರಾ, ವೆಬ್ ಕಾಸ್ಟಿಂಗ್ ಕಣ್ಣಾವಲಿನಲ್ಲಿ ಪರೀಕ್ಷೆಗಳು ನಡೆಯಲಿವೆ.
ಏ.4ರವರೆಗೆ ನಡೆಯುವ ಪರೀಕ್ಷೆಗಳಿಗೆ ಸಕಲ ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ಶಾಲಾ ಪರೀಕ್ಷೆಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಪರೀಕ್ಷೆಗೆ 8.42 ಲಕ್ಷ ವಿದ್ಯಾರ್ಥಿಗಳು ಸೇರಿ ಒಟ್ಟು 8,96,887 ಮಕ್ಕಳು ನೋಂದಾಯಿಸಿದ್ದಾರೆ. ಈ ಪೈಕಿ 3.35 ಲಕ್ಷಕ್ಕೂ ಹೆಚ್ಚು ಗಂಡುಮಕ್ಕಳು, 3.78 ಲಕ್ಷಕ್ಕೂ ಹೆಚ್ಚು ಬಾಲಕಿಯರು ಮತ್ತು 5 ತೃತೀಯ ಲಿಂಗಿಗಳು ಇದ್ದಾರೆ.
ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ, ಮುಂಜಾಗ್ರತಾ ಕ್ರಮ ಹಾಗೂ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. 2,818 ಸ್ಥಾನಿಕ ದಳ, ಜಿಲ್ಲಾ ಹಂತದಲ್ಲಿ 400, ತಾಲೂಕು ಹಂತದಲ್ಲಿ 1,662 ವಿಚಕ್ಷಣ ದಳವನ್ನು ಪರೀಕ್ಷಾ ಭದ್ರತೆ ದೃಷ್ಟಿಯಿಂದ ನೇಮಿಸಲಾಗಿದೆ.
ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇರಲಿದ್ದು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಸೇರಿ ಉನ್ನತ ಅಧಿಕಾರಿಗಳು ಜಿಲ್ಲಾ ನಿಯಂತ್ರಣ ಕೊಠಡಲ್ಲೇ ಕೂತು ತಮ್ಮ ಜಿಲ್ಲಾ ವ್ಯಾಪ್ತಿಯ ಕೇಂದ್ರಗಳ ಪ್ರತಿ ಕೊಠಡಿಯ ಚಿತ್ರಣ ವೀಕ್ಷಣೆ ಮಾಡುತ್ತಿರುತ್ತಾರೆ.
ಪರೀಕ್ಷಾ ಸಮಯದಲ್ಲಿ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸ ಲಾಗಿದೆ. ಜೆರಾಕ್ಸ್, ಸೈಬರ್, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವಂತಿಲ್ಲ. ಪರೀಕ್ಷಾ ಕೇಂದ್ರಗಳ ಒಳಗೆ ಮೊಬೈಲ್ ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇಯರ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮತ್ತು ಇತರ ಸಾರಿಗೆ ನಿಗಮಗಳು ಪರೀಕ್ಷೆಯ ದಿನದಂದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸಲಿವೆ.
ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿಗಳು ಮತ್ತು ಪ್ರವೇಶ ಚೀಟಿಯನ್ನು ತೋರಿಸುವ ಮೂಲಕ ಸೇವೆಯನ್ನು ಪಡೆಯಬಹುದು.
ಈ ವರ್ಷ, ಕೆಎಸ್‌ಇಎಬಿ ಕೋವಿಡ್ ಪೂರ್ವ ಮೌಲ್ಯಮಾಪನ ವ್ಯವಸ್ಥೆಗೆ ಮರಳಿದ್ದು, ಈ ಬಾರಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 35% ಅಂಕಗಳನ್ನು ಗಳಿಸಲೇಬೇಕಿದೆ.
ಶುಭ ಹಾರೈಸಿದ ಸಿಎಂ
ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದಿನಿಂದ ಆರಂಭಗೊಳ್ಳುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಎದುರಿಸುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿದೆ ಎಂದು ಹೇಳಿದ್ದಾರೆ.
Advertisement