
ಬೆಂಗಳೂರು: ಮದುವೆ ಸಂಭ್ರಮದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬಿಜಿಎಸ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ಮಾಗಡಿ ಶಾಸಕ ಎಚ್ .ಸಿ ಬಾಲಕೃಷ್ಣ ಅವರ ಆಪ್ತ ಲೋಕನಾಥ್ ಸಿಂಗ್ (37) ಹತ್ಯೆಯಾದ ಉದ್ಯಮಿ. ಲೋಕನಾಥ್ ಸಿಂಗ್‌ಗೆ ಇದೇ ತಿಂಗಳು ಮದುವೆ ನಿಶ್ವಯವಾಗಿತ್ತು. ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಉದ್ಯಮಿಯನ್ನು ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಲೋಕನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಲೋಕನಾಥ್ ಸಿಂಗ್ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ನಾಲ್ಕೈದು ಮಂದಿ ಸ್ನೇಹಿತರ ಜತೆ ಸೋಲದೇವನಹಳ್ಳಿಯ ಬಿಳಿಜಾಜಿಯ ಬಿಜಿಎಸ್ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಬಳಿ ಕಾರಿನಲ್ಲಿ ಬಂದು ಮದ್ಯ ಸೇವಿಸಿದ್ದಾರೆ. ಈ ವೇಳೆ ಯಾವುದೋ ವಿಚಾರಕ್ಕೆ ಜತೆಯಲ್ಲಿದ್ದವರೇ ಲೋಕನಾಥ್ ಸಿಂಗ್ ಕುತ್ತಿಗೆಗೆ ಮಾರಕಾಸ್ತ್ರದಿಂದ ಚುಚ್ಚಿದ್ದಾರೆ. ಆದರೂ ಲೋಕನಾಥ್, ಪ್ರಾಣ ರಕ್ಷಣೆಗಾಗಿ ಆರೋಪಿಗಳನ್ನು ತಳ್ಳಿ ಕಾರಿನಿಂದ ಇಳಿದು ಸ್ವಲ್ಪ ದೂರ ಓಡಿ ಹೋದರು. ಆದರೆ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ಹೇಳಿದ್ದಾರೆ.
ಪೊಲೀಸರು ಘಟನಾ ಸ್ಥಳದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು. ಲೋಕನಾಥ್ ಸಿಂಗ್ ಜತೆ ಬಂದಿದ್ದ ಅವರ ಗನ್‌ಮ್ಯಾನ್ ಕೂಡ ನಾಪತ್ತೆಯಾಗಿದ್ದು, ಆತನ ಮೇಲೂ ಅನುಮಾನ ಇದೆ’ ಎಂದು ಪೊಲೀಸರು ಮಾಹಿತಿ ನೀಡಿದರು. ಉದ್ಯಮಿಯಾಗಿದ್ದ ಲೋಕನಾಥ್ ಸಿಂಗ್ ವಿರುದ್ಧ ನಗರದ ಕೆಲ ಠಾಣೆಗಳಲ್ಲಿ ಮೂರಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ.
Advertisement