
ಬೆಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಕುರಿತು ನಡೆಯುತ್ತಿರುವ ಚರ್ಚೆಯ ಮಧ್ಯೆ, ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭಾನುವಾರ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಸಮಾರೋಪ ದಿನದಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಹೊಸಬಾಳೆ, 'ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನ ಶಿಲ್ಪಿಗೆ ವಿರುದ್ಧವಾಗಿದೆ' ಎಂದು ಹೇಳಿದರು.
ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿಯನ್ನು ಒದಗಿಸಲು ಸಂಯುಕ್ತ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಈ ಹಿಂದೆ ಮಾಡಿದ ಪ್ರಯತ್ನಗಳನ್ನು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ತಳ್ಳಿಹಾಕಿವೆ. ಅಂತಹ ಮೀಸಲಾತಿ ಒದಗಿಸಲು ಇರುವ ನಿಬಂಧನೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ 17ನೇ ಶತಮಾನದ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯ ವಿವಾದದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೊಸಬಾಳೆ, ಸಾಮಾಜಿಕ ಸಾಮರಸ್ಯದಲ್ಲಿ ನಂಬಿಕೆಯಿಟ್ಟಿದ್ದ ಸಹೋದರ ದಾರಾ ಶಿಕೋಹ್‌ನ ಬದಲಿಗೆ ಔರಂಗಜೇಬ್‌ನನ್ನು ಐಕಾನ್ ಆಗಿ ಮಾಡಲಾಗಿದೆ. ಭಾರತದ ನೀತಿಗೆ ವಿರುದ್ಧವಾಗಿ ಹೋರಾಡಿದವರನ್ನು ಐಕಾನ್‌ಗಳನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದರು.
ಬ್ರಿಟಿಷರ ವಿರುದ್ಧ ಹೋರಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯುತ್ತಾರೆಯೇ ಹೊರತು ಆಕ್ರಮಣಕಾರರನ್ನು ಹಾಗೆ ಕರೆಯಬಹುದೇ. "ಆಕ್ರಮಣಕಾರ ಮನಸ್ಥಿತಿ" ಹೊಂದಿರುವ ಜನರು ಭಾರತಕ್ಕೆ ಅಪಾಯವನ್ನುಂಟುಮಾಡುತ್ತಾರೆ. ಭಾರತೀಯ ನೀತಿಯೊಂದಿಗೆ ಇರುವವರೊಂದಿಗೆ ನಾವು ನಿಲ್ಲಬೇಕು ಎಂದು ಹೇಳಿದ ಅವರು, ಮೊಘಲ್ ಚಕ್ರವರ್ತಿ ಅಕ್ಬರ್ ವಿರುದ್ಧ ಹೋರಾಡಿದ ರಜಪೂತ ರಾಜ ಮಹಾರಾಣಾ ಪ್ರತಾಪ್‌ನಂತಹ ವ್ಯಕ್ತಿಗಳನ್ನು ಹೊಸಬಾಳೆ ಶ್ಲಾಘಿಸಿದರು.
Advertisement