
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಕೇಳಿ ಬಂದ ಪ್ರೋಟೋಕಾಲ್ ದುರ್ಬಳಕೆ ವಿಚಾರ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧನಕ್ಕೊಳಪಡಿಸಿದ್ದರು. ಬಳಿಕ ಪ್ರಕರಣದಲ್ಲಿ ಪೊಲೀಸ್ ಪ್ರೋಟೋಕಾಲ್ ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಬಳಿಕ ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಈ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾಗೆ ಆದೇಶಿಸಿತ್ತು. ಇದೀಗ ವರದಿ ಸಿದ್ಧಪಡಿಸಿರುವ ಗುಪ್ತಾ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆಂದು ತಿಳಿದುಬಂದಿದೆ. ವರದಿಯಲ್ಲಿರುವ ಮಾಹಿತಿ ಇನ್ನು ತಿಳಿದುಬಂದಿಲ್ಲ.
ಪ್ರಕರಣ ಸಂಬಂಧ ಮಾರ್ಚ್ 15 ರಂದು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಕಡ್ಡಾಯ ರಜೆಗೆ ಆದೇಶಿಸಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದ ಮೂಲಕ ಆಗಮಿಸಿದ್ದ ರನ್ಯಾ ಅವರನ್ನು ತಡೆದಿದ್ದ ಅಧಿಕಾರಿಗಳು, ಅವರನ್ನು ಬಂಧನಕ್ಕೊಳಪಡಿಸಿದ್ದರು. ತಪಾಸಣೆ ವೇಳೆ ರನ್ಯಾ ಅವರಿಂದ 14.2 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಇದರ ಮೌಲ್ಯ 12.56 ಕೋಟಿ ರೂ.ಆಗಿದೆ.
Advertisement