ಅರ್ಜಿ ಆಹ್ವಾನಿಸದೆ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ವಿತರಣೆಗೆ ರಾಜ್ಯ ಸರ್ಕಾರ ಚಿಂತನೆ..!

ಪ್ರಶಸ್ತಿಗಳು ಕೇಳಿ ಪಡೆಯುವಂತೆ‌ ಆಗಬಾರದು.‌ ಅರ್ಹರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಪ್ರಶಸ್ತಿ ನೀಡಿ ಗೌರವಿಸುವಂತೆ ಆಗಬೇಕು. ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಲಿದೆ.‌
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಹ ವ್ಯಕ್ತಿಗಳನ್ನು ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವ ಬದಲು ಅವರ ಸಾಧನೆಗಳ ಆಧಾರದ ಮೇಲೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಣೆ ಮಾಡುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್ ತಂಗಡಗಿ ಅವರು, ಪ್ರಶಸ್ತಿಗಳು ಕೇಳಿ ಪಡೆಯುವಂತೆ‌ ಆಗಬಾರದು.‌ ಅರ್ಹರನ್ನು ಗುರುತಿಸಿ, ಅವರ ಮನೆ ಬಾಗಿಲಿಗೆ ಪ್ರಶಸ್ತಿ ನೀಡಿ ಗೌರವಿಸುವಂತೆ ಆಗಬೇಕು. ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಲಿದೆ.‌ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೂ ಚರ್ಚೆ ನಡೆಸುತ್ತೇನೆಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗುತ್ತಿತ್ತು. ನಾನು ಜಿಲ್ಲಾ ಪ್ರವಾಸಕ್ಕೆ ಹೋದರೆ ಅರ್ಜಿ ಹಾಗೂ ದಾಖಲೆಗಳನ್ನು ಇಟ್ಟುಕೊಳ್ಳಲು ಜೊತೆಯಲ್ಲಿ ಹೆಚ್ಚುವರಿ ಕಾರನ್ನು ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಕಳೆದ ಬಾರಿ ಅರ್ಜಿ ಹಾಕದ ಅಂದಾಜು 25ಕ್ಕೂ ಹೆಚ್ಚು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉದಾಹರಣೆಗೆ ಕೊಪ್ಪಳ ಜಿಲ್ಲೆಯ ವೃದ್ಧೆ ಹುಚ್ಚವ್ವ ಎಂಬುವರು ತಮ್ಮ ಕೋಟ್ಯಂತರ ‌ಬೆಲೆಬಾಳುವ ಎರಡು ಎಕರೆ ಜಾಗವನ್ನು ಶಾಲೆಗೆಂದು ನೀಡಿ ಔದಾರ್ಯತೆ ಮೆರೆದಿದ್ದರು. ಇಂತಹವರನ್ನು ಗುರುತಿಸಿ ಪ್ರಶಸ್ತಿ ನೀಡಿದ ತೃಪ್ತಿ ಇದೆ ಎಂದು ತಿಳಿಸಿದರು.

ಅರ್ಜಿ ಸ್ವೀಕರಿಸದೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಡಿನ‌ ಸಾಹಿತಿಗಳು ಸಮ್ಮತಿಸಿದ್ದು, ಈ ಬಗ್ಗೆ ಇನ್ನಷ್ಟು ಉತ್ತಮ ಸಲಹೆಗಳು ಬರಲಿ. ಈ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗಲಿ. ಇನ್ನು ಪ್ರಶಸ್ತಿ ನೀಡಿಕೆ‌ ವಿಷಯದಲ್ಲಿ ನಮ್ಮ ಸರ್ಕಾರ ಸಮಾಜಿಕ ನ್ಯಾಯವನ್ನು ಪರಿಪಾಲನೆ ಮಾಡುತ್ತಿದೆ.‌ ಅದನ್ನೇ ಮುಂದೆಯೂ ಕೂಡ ಮುಂದುರೆಸಲಾಗುವುದು ಎಂದು‌ ಹೇಳಿದರು.

ಇನ್ನು ಈ ಹಿಂದೆ‌ ಅಧಿಕಾರದಲ್ಲಿದ್ದ ಸರ್ಕಾರ ಮೂರು ವರ್ಷ‌ ಯಾವುದೇ ಪ್ರಶಸ್ತಿ ನೀಡದೆ, ಕೈ ಬಿಟ್ಟಿತ್ತು. ನಾವು ಅಧಿಕಾರಕ್ಕೆ ಬಂದ ಕೂಡಲೇ 25 ವಿಭಾಗದಲ್ಲಿ‌ 75 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಲ್ಲದೆ,‌ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನೇಮಕ ಮಾಡುವ ಮೂಲಕ ಅಕಾಡೆಮಿಗಳಿಗೆ ಶಕ್ತಿ ತುಂಬುವ ಕೆಲಸ ಆಗಿದೆ.‌ ಪರಿಣಾಮ ಬೆಂಗಳೂರಿಗೆ ಮಾತ್ರ ಸಿಮೀತವಾಗಿದ್ದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುತ್ತಿವೆ ಎಂದು ಹೇಳಿದರು.

ಸಮಾರಂಭದಲ್ಲಿ ಡಾ.ಸಿ.ವೀರಣ್ಣ, ಡಾ.ಶ್ರೀರಾಮ್ ಇಟ್ಟಣ್ಣನವರ್, ಜಾಣಗೆರೆ ವೆಂಕಟರಾಮಯ್ಯ, ಎ.ಎಂ.ಮದರಿ ಮತ್ತು ಡಾ.ಸಬಿಹಾ ಭೂಮಿಗೌಡ ಅವರಿಗೆ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇತರ 10 ಮಂದಿಗೆ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಾಗಿ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com