
ಬೆಂಗಳೂರು: ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ 45 ವರ್ಷದ ವ್ಯಕ್ತಿ ಹಾಗೂ ಅವರ ಪತ್ನಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿರುವ ಘಟನೆ ಇಂದು ಬೆಳಗ್ಗೆ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದೇಶ್ ಹಾಗೂ ಅವರ 44 ವರ್ಷದ ಪತ್ನಿ ಶಿಶಿಲಾ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಎದ್ದ ಕೂಡಲೇ ಸಿದ್ದೇಶ್ ಟೀ ಮಾಡಲು ಕಿಚನ್ ಗೆ ಹೋಗಿದ್ದು, ಗ್ಯಾಸ್ ಸ್ಟೌವ್ ಹಚ್ಚಿದ್ದಾರೆ. ಸಿಲಿಂಡರ್ ಹಠಾತ್ತನೇ ಸ್ಫೋಟಿಸಿದ್ದು, ಅವರು ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ.
ಸ್ಪೋಟಕ್ಕೆ ಅನಿಲ ಸೋರಿಕೆ ಕಾರಣವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಸಿದ್ದೇಶ್ ದೇಹದ ಶೇ. 45 ರಷ್ಟು ಭಾಗ ಸುಟ್ಟ ಗಾಯಗಳಾಗಿದ್ದರೆ, ಅವರ ಪತ್ನಿಗೆ ಶೇ. 90 ರಷ್ಟು ಭಾಗ ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement