
ಬೆಳಗಾವಿ: ಆಘಾತಕಾರಿ ಘಟನೆಯೊಂದರಲ್ಲಿ ಸೈಬರ್ ವಂಚಕರು ವೀಡಿಯೊ ಕರೆಗಳ ಮೂಲಕ ನಡೆಸಿದ ಮಾನಸಿಕ ಹಿಂಸೆಯಿಂದಾಗಿ ಖಾನಾಪುರ ಬಳಿ ವೃದ್ಧ ದಂಪತಿಗಳು ಗುರುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಎಂದು ಗುರುತಿಸಲಾಗಿದೆ.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಲೇದ್ ಅವರ ಪ್ರಕಾರ, ದಂಪತಿಗಳು ಸೈಬರ್ ವಂಚಕರು ಬೆದರಿಕೆ ಕರೆ ಮಾಡಿ ಡಯಾಗೊ ಅವರಿಂದ 50 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ತಮ್ಮ ಖಾತೆಗೆ ವರ್ಗಾಹಿಸಿಕೊಂಡಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಮತ್ತೆ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಜೀವನವನ್ನು ಕೊನೆಗೊಳಿಸಲು ದಂಪತಿ ನಿರ್ಧರಿಸಿದ್ದರು. ತಮ್ಮ ಡೆತ್ ನೋಟ್‌ನಲ್ಲಿ, ದಂಪತಿಗಳು ಗೋವಾದಲ್ಲಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ಆಸ್ತಿಗಳನ್ನು ಮಾರಿ ಮರುಪಾವತಿಸಬೇಕೆಂದು ಹೇಳಿದ್ದಾರೆ.
ಫ್ಲೇವಿಯಾನಾ ಮನೆಯೊಳಗೆ ಶವವಾಗಿ ಬಿದ್ದಿದ್ದರೆ ಡಿಯಾಗೋ ಅವರು ಮನೆಯ ನೀರಿನ ಟ್ಯಾಂಕ್‌ನಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಕಂಡ ನೆರೆಹೊರೆಯವರು ನಂದಗಡ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು ಶವಗಳನ್ನು ಖಾನಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸ್ಥಳದಿಂದ ಇಂಗ್ಲಿಷ್‌ನಲ್ಲಿ ಬರೆದಿರುವ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ದೆಹಲಿಯ ಉನ್ನತ ದೂರಸಂಪರ್ಕ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಡಿಯಾಗೋ ನಜರೆತ್ ಬರೆದಿದ್ದಾರೆ. ತನ್ನ ಸಿಮ್ ಕಾರ್ಡ್ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ 'ಡಿಜಿಟಲ್ ಬಂಧನ' ಮಾಡಲಾಗುತ್ತಿದೆ ಎಂದು ಡಿಯಾಗೋಗೆ ವಂಚಕ ಬೆದರಿಕೆ ಹಾಕಿದ್ದರು.
ಮೃತ ಡಿಯಾಗೋ ಮಹಾರಾಷ್ಟ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತ ಡಿಯಾಗೋ ಸಾಕ್ಷರರಾಗಿದ್ದು, ಅವರು ಅನೇಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತರಬೇತಿ ನೀಡಿದ್ದರು. ಮೃತ ಡಿಯಾಗೋ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಶವಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಅಧ್ಯಯನಕ್ಕಾಗಿ ದಾನ ಮಾಡಬೇಕೆಂದು ಒತ್ತಾಯಿಸಿದರು. ಅದರಂತೆ ದಂಪತಿಗಳು ಬಯಸಿದಂತೆ ಶವಗಳನ್ನು ಬಿಐಎಂಎಸ್‌ಗೆ ಹಸ್ತಾಂತರಿಸಲಾಯಿತು. ಆದಾಗ್ಯೂ, ತಾಂತ್ರಿಕ ಕಾರಣಗಳಿಂದ ಬಿಐಎಂಎಸ್ ಶವಗಳನ್ನು ಸ್ವೀಕರಿಸಲಿಲ್ಲ, ನಂತರ ಎರಡೂ ಶವಗಳನ್ನು ಬೀಡಿ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Advertisement