
ಬೆಂಗಳೂರು: ಒಂದನೇ ತರಗತಿ ಶಾಲಾ ಪ್ರವೇಶ ವಯೋಮಿತಿಯನ್ನು ರಾಜ್ಯ ಶಿಕ್ಷಣ ನೀತಿ (SEP)ಆಯೋಗದ ಶಿಫಾರಸಿನಂತೆ ನಿಗದಿಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶನಿವಾರ ಹೇಳಿದ್ದಾರೆ.
1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ವಯೋಮಿತಿ ಸಡಿಲಿಕೆ ನೀಡುವಂತೆ ಹಲವು ಪೋಷಕರ ಮನವಿಯ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ಹಿಂದಿನ ಸರ್ಕಾರ ಮಾಡಿದ ತಪ್ಪಾಗಿದೆ. ಅವರು ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗಸೂಚಿ ರೂಪಿಸಿದ್ದಾರೆ. ನಾವು ಅದರ ವಿರುದ್ಧವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದರು.
ಎಸ್‌ಇಪಿ ಆಯೋಗದಿಂದ ಇಲಾಖೆಯು ಮಾರ್ಗಸೂಚಿಗಳನ್ನು ಸ್ವೀಕರಿಸಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಈ ಸಮಸ್ಯೆ ಕುರಿತು ಚರ್ಚಿಸಿ ಅದನ್ನು ಕಾರ್ಯಗತಗೊಳಿಸುವುದಾಗಿ ಸಚಿವರು ಹೇಳಿದರು. ಈ ವಿಷಯದ ಬಗ್ಗೆ ಸಚಿವರೊಂದಿಗೆ ಮಾತನಾಡಲು ಪೋಷಕರ ಗುಂಪೊಂದು ಸಚಿವರ ನಿವಾಸದ ಬಳಿ ಹೈಡ್ರಾಮ ನಡೆಸಿತು.
ಮಾಧ್ಯಮದವರ ಜೊತೆಗೆ ಪೋಷಕರನ್ನು ಕಂಡ ಮಧು ಬಂಗಾರಪ್ಪ ಸಿಟ್ಟಿಗೆದ್ದು ನಾನ್ ಸೆನ್ಸ್ ಎಂದು ಕಿಡಿಕಾರಿದರು. 2022ರ ನವೆಂಬರ್ 15ರಂದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಂತೆ ಮಕ್ಕಳಿಗೆ ಜೂನ್ 1, 2025 ರೊಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷಕ್ಕೆ 1 ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ
ಈ ಹಿಂದೆ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು 5.5 ವರ್ಷವಾಗಿತ್ತು. ಪೋಷಕರು ಮತ್ತು ಇತರ ಸಂಘಟನೆಗಳ ಪ್ರತಿಭಟನೆಯ ನಂತರ, ಇಲಾಖೆಯು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದ್ದು, ನವೆಂಬರ್ 2022 ರ ಆದೇಶವನ್ನು 2025-26 ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಹೇಳಿದೆ.
Advertisement