ಅನುಪಮ್ ಅಗರ್ವಾಲ್
ಅನುಪಮ್ ಅಗರ್ವಾಲ್

ಮಂಗಳೂರಿನಲ್ಲಿ ಗುಂಪು ಹತ್ಯೆ ಪ್ರಕರಣ: ಗೋಕಾಕ್‌ನಲ್ಲಿ ಮತ್ತೊಬ್ಬ ಆರೋಪಿ ಬಂಧನ

ಗುಂಪು ಹತ್ಯೆಗೆ ಕಾರಣವೇನು ಎಂಬುದನ್ನು ದೃಢೀಕರಿಸಲು ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಯಾವುದೇ ಪುರಾವೆಗಳು ಅಥವಾ ಸರಿಯಾದ ಪ್ರತ್ಯಕ್ಷದರ್ಶಿ ಸಿಕ್ಕಿಲ್ಲ.
Published on

ಮಂಗಳೂರು: ಮಂಗಳೂರಿನ ಕುಡುಪುವಿನಲ್ಲಿ ಕೇರಳ ಮೂಲದ ಮುಸ್ಲಿಂ ಯುವಕ ಮೊಹಮ್ಮದ್ ಅಶ್ರಫ್ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಗೋಕಾಕ್‌ನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು, ಈ ಗುಂಪು ಹತ್ಯೆಗೆ ಕಾರಣವೇನು ಎಂಬುದನ್ನು ದೃಢೀಕರಿಸಲು ಮತ್ತು ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಯಾವುದೇ ಪುರಾವೆಗಳು ಅಥವಾ ಸರಿಯಾದ ಪ್ರತ್ಯಕ್ಷದರ್ಶಿ ಸಿಕ್ಕಿಲ್ಲ. ಇಂದು ಬೆಳಗ್ಗೆ ಗೋಕಾಕ್‌ನಿಂದ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ ಎಂದರು.

"ದಾಳಿಗೆ ಕಾರಣವೇನು ಎಂಬುದನ್ನು ದೃಢೀಕರಿಸಲು ಪ್ರಕರಣದಲ್ಲಿ ನಮಗೆ ಸರಿಯಾದ ಪ್ರತ್ಯಕ್ಷದರ್ಶಿ ಇಲ್ಲ. ಪ್ರತ್ಯಕ್ಷದರ್ಶಿಗಳು ಒಬ್ಬ ವ್ಯಕ್ತಿ(ಪ್ರಮುಖ ಆರೋಪಿ ಸಚಿನ್) ಮತ್ತೊಬ್ಬ ವ್ಯಕ್ತಿಯನ್ನು ಹೊಡೆಯುವುದನ್ನು ನೋಡಿದ್ದೇವೆ ಮತ್ತು ಅವನು ಆ ವ್ಯಕ್ತಿಯನ್ನು ಏಕೆ ಹೊಡೆಯುತ್ತಿದ್ದಾನೆಂದು ಅವರಿಗೆ ಗೊತ್ತಿಲ್ಲ ಎಂದಿದ್ದಾರೆ. ಹಲ್ಲೆ ನಡೆಸುತ್ತಿದ್ದ ಸಚಿನ್ ಜತೆ ಆತನ ಸ್ನೇಹಿತರು ಸೇರಿಕೊಂಡರು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಅಗರ್ವಾಲ್ ತಿಳಿಸಿದರು.

ಅನುಪಮ್ ಅಗರ್ವಾಲ್
ಮಂಗಳೂರಿನಲ್ಲಿ ಗುಂಪು ಹತ್ಯೆ: ಬಿಜೆಪಿ ಮಾಜಿ ಕಾರ್ಪೊರೇಟರ್‌ ಪತಿ ಬಂಧನಕ್ಕೆ SDPI ಆಗ್ರಹ

ಈ ಪ್ರಕರಣದಲ್ಲಿ ಇದುವರೆಗೆ 20 ಜನರನ್ನು ಬಂಧಿಸಲಾಗಿದೆ. "ಗುರುವಾರ ಬೆಳಗ್ಗೆ ಗೋಕಾಕ್‌ನಿಂದ ಅನಿಲ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ಸಂಖ್ಯೆ 21ಕ್ಕೆ ಏರಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ನಮ್ಮ ತಂಡ ಹುಡುಕಾಟ ನಡೆಸುತ್ತಿವೆ. ಘಟನೆಯ ಸಮಯದಲ್ಲಿ ಹಾಜರಿದ್ದ ಮತ್ತು ವಿಚಾರಣೆಗೆ ಹಾಜರಾಗಿದ್ದ ಇನ್ನೂ 15 ಜನರಿಗೆ ನಾವು ನೋಟಿಸ್ ನೀಡಿದ್ದೇವೆ. ಆ ಪ್ರದೇಶದಲ್ಲಿ ಲಭ್ಯವಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ದಾಳಿಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಪ್ರತ್ಯಕ್ಷದರ್ಶಿಗಳನ್ನು ಪ್ರಶ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು, "ಏಪ್ರಿಲ್ 27 ರಂದು, ಕುಡುಪುವಿನ ದೇವಸ್ಥಾನದ ಬಳಿ ಅಶ್ರಫ್ ಅವರ ಶವ ಬಿದ್ದಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು ಮತ್ತು ಆರಂಭದಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿತ್ತು. ನಂತರ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಅದೇ ಸಮಯದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಎಂದು ನಮಗೆ ತಿಳಿಯಿತು ಎಂದರು.

ಸ್ಥಳೀಯ ಪೊಲೀಸರಿಗೆ ಹಲ್ಲೆಯ ಬಗ್ಗೆ ಮಾಹಿತಿ ಇದ್ದರೂ, ಅವರು ಅದನ್ನು ನಮ್ಮ ಗಮನಕ್ಕೆ ತರಲಿಲ್ಲ. ಇದರಿಂದಾಗಿ ನೇರವಾಗಿ ಕೊಲೆ ಎಂದು ಪರಿಗಣಿಸಬೇಕಾದ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಕರ್ತವ್ಯ ಲೋಪ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com