

ಬೆಳಗಾವಿ: ಅನಾರೋಗ್ಯದ ಕಾರಣದಿಂದಾಗಿ ದನಗಳ ಮೇಯಿಸಲು ಕರೆದುಕೊಂಡು ಹೋಗದ ವೃದ್ಧ ರೈತನೊಬ್ಬನನ್ನು ಮಾಲೀಕ ಬಡಿದು ಹತ್ಯೆ ಮಾಡಿರುವ ಘಟನೆಯೊಂದು ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹಿರೇಬಾಗೇವಾಡಿಯ ನೇಕಾರ ಗಲ್ಲಿ ನಿವಾಸಿ ಭೀಮಪ್ಪ ನಿಂಗಪ್ಪ ಕೆಂಡಪ್ಪಣ್ಣವರ್ (65) ಎಂದು ಗುರ್ತಿಸಲಾಗಿದೆ.
ನಾಗನಗೌಡ ಗೌಡಪ್ಪ ಪಾಟೀಲ್ ಒಡೆತನದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಭೀಮಪ್ಪ, ಪಾಟೀಲ್ ಅವರ ಕೃಷಿ ಭೂಮಿಯಲ್ಲಿ ಕೆಲಸ ಮಾಡಿಕೊಂಡು, ಅವರ ಜಾನುವಾರುಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಅನಾರೋಗ್ಯದ ಕಾರಣ ಭೀಮಪ್ಪ ಅವರಿಗೆ ದನಗಳನ್ನು ನೋಡಿಕೊಳ್ಳಲು, ತನ್ನ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಲ್ಲ.
ಮೇ 1ರ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಭೀಮಪ್ಪ ಅವರ ಆರೋಗ್ಯ ಹದಗೆಟ್ಟಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮನೆಗೆ ಬಂದಿರುವ ಮಾಲೀಕ ನಾಗನಗೌಡ, ದನಗಳನ್ನು ಮೇಯಿಸಲು ಕರೆದುಕೊಂಡ ಹೋಗದ್ದಕ್ಕೆ ಕೋಪದಿಂದ ಪ್ರಶ್ನಿಸಿದ್ದಾನೆ. ಬದುಕಿದ್ದೀಯಾ ಅಥವಾ ಸತ್ತಿದ್ದೀಯಾ ಎಂದು ಕಾಲಿನಿಂದ ಒದ್ದಿದ್ದಾನೆಂದು ಹೇಳಲಾಗುತ್ತಿದೆ.
ಹಲ್ಲೆಯಿಂದ ಗಾಯಗೊಂಡಿಜದ್ದ ಭೀಮಪ್ಪ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಹಿರೇಬಾಗೇವಾಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬಳಿಕ ಜಿಲ್ಲಾಸ್ಪತ್ರೆಗೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಭೀಮಪ್ಪ ಅವರ ಮರಣೋತ್ತರ ಪರೀಕ್ಷೆಯನ್ನು ಹುಬ್ಬಳ್ಳಿಯಲ್ಲಿ ನಡೆಸಲಾಗಿದ್ದು, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಘಟನೆ ಬೆನ್ನಲ್ಲೇ ಭೀಮಪ್ಪ ಅವರ ಮಗ ಹನುಮಂತ ಕೆಂಡಪ್ಪಣ್ಣವರ್ ಅವರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಾಗನಗೌಡ ಪಾಟೀಲ್ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಬ್-ಇನ್ಸ್‌ಪೆಕ್ಟರ್ ಅವಿನಾಶ್ ಎ.ವೈ ಮತ್ತು ಅವರ ತಂಡವು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ತನಿಖೆಯ ಭಾಗವಾಗಿ ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
Advertisement