ಬೆಂಗಳೂರು: ಮೊಬೈಲ್ ಲೌಡ್‌ಸ್ಪೀಕರ್ ವಿಚಾರಕ್ಕೆ ಪತ್ನಿಯನ್ನು ಕೊಂದ ಪತಿ; ಬಂಧನ
ಬೆಂಗಳೂರು : ಮೊಬೈಲ್ ಫೋನ್ ಲೌಡ್ ಸ್ಪೀಕರ್ ಹಾಕುವ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತ್ನಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾಗಣಪತಿನಗರ ನಿವಾಸಿ ಲೋಕೇಶ್ ಕುಮಾರ್ ಗೆಹಲೋಟ್ (43) ಬಂಧಿತ. ಈತ ಏ.24ರಂದು ಸಂಜೆ ಸುಮಾರು 6 ಗಂಟೆಗೆ ಪತ್ನಿ ನಮಿತಾ ಸಾಹು (43) ಜತೆಗೆ ಜಗಳ ತೆಗೆದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ರಾಜಸ್ಥಾನ ಮೂಲದ ಲೋಕೇಶ್ ಕಬ್ಬನ್‌ಪೇಟೆಯಲ್ಲಿ ಫೋಟೋ ಸ್ಟುಡಿಯೋ ನಡೆಸುತ್ತಿದ್ದ. ಐದು ವರ್ಷಗಳ ನಮಿತಾ ಸಾಹುರನ್ನು ಮದುವೆ ಆಗಿದ್ದ. ದಂಪತಿಗೆ 3 ವರ್ಷದ ಹೆಣ್ಣು ಮಗುವಿದ್ದು, ಬಸವೇಶ್ವರನಗರದ ಮಹಾಗಣಪತಿ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.
ಆರೋಪಿ ಲೋಕೇಶ್ ಏ.24ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಈ ವೇಳೆ ಪತ್ನಿಯ ಅಣ್ಣ ಸತ್ಯಂ, ಲೋಕೇಶ್ ಮೊಬೈಲ್‌ಗೆ ಕರೆ ಮಾಡಿದ್ದರಿಂದ ಆತನೊಂದಿಗೆ ಮಾತನಾಡುತ್ತಿದ್ದ. ಆಗ ಪತ್ನಿ ನಮಿತಾ ಯಾರು ಕರೆ ಮಾಡಿರುವುದು ಎಂದು ಕೇಳಿದ್ದಾರೆ.
ಅದಕ್ಕೆ ನಿಮ್ಮ ಅಣ್ಣ ಎಂದು ಲೋಕೇಶ್ ಹೇಳಿದ್ದಾನೆ. ಹಾಗಾದರೆ, ಲೌಡ್ ಸ್ಪೀಕರ್ ಹಾಕಿಕೊಂಡು ಮಾತನಾಡಿ ಎಂದು ನಮಿತಾ ಹೇಳಿದ್ದಾಳೆ ಅಷ್ಟಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಲೋಕೇಶ್ ರೊಚ್ಚಿಗೆದ್ದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆಕೆಯನ್ನು ನೆಲಕ್ಕೆ ಕೆಡವಿ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.
ನಮಿತಾ ಅವರ ಕುಟುಂಬ ಸದಸ್ಯರು, ಗೆಹ್ಲೋಟ್ ತಮ್ಮ ಫೋಟೋ ಸ್ಟುಡಿಯೋ ಅಭಿವೃದ್ಧಿಪಡಿಸಲು ಮತ್ತು ನಗರದಲ್ಲಿ ಒಂದು ನಿವೇಶನ ಖರೀದಿಸಲು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮಿತಾ ಮದುವೆಗೆ ಮೊದಲು ಕೆಲಸ ಮಾಡುವಾಗ ಉಳಿಸಿದ್ದ 60,000 ರೂ.ಗಳನ್ನು ಅವರು ಪಡೆದಿದ್ದರು. ಅವರ ಪೋಷಕರ ಮನೆಯಿಂದ ಹೆಚ್ಚಿನ ಹಣಕ್ಕಾಗಿ ಅವರು ಒತ್ತಡ ಹೇರಿದ್ದರು. ಪೊಲೀಸರು ಬಿಎನ್‌ಎಸ್ ಸೆಕ್ಷನ್ 80 (ವರದಕ್ಷಿಣೆ ಸಾವು) ಮತ್ತು 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೆಹ್ಲೋಟ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ