ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ: ಹಟ್ಟಿ, ತಾಂಡಾಗಳ 1 ಲಕ್ಷ ಜನರಿಗೆ ಪಟ್ಟಾ ಖಾತೆ- ಡಿ.ಕೆ ಶಿವಕುಮಾರ್

ಕಾಂಗ್ರೆಸ್ ‌ಸರ್ಕಾರ ಅಧಿಕಾರಕ್ಕೆ ಬಂದ ನಂತರ‌ ಕೊಟ್ಟ ಮಾತು ಉಳಿಸಿಕೊಂಡಿದೆ. ಯುವಕರಿಗೆ ಯುವನಿಧಿ ಮೂಲಕ ನೆರವಿಗೆ ನಿಂತಿದೆ.
DCM Dk Shivakumar
ಡಿಸಿಎಂ ಡಿಕೆ ಶಿವಕುಮಾರ್
Updated on

ರಾಮನಗರ: ಕಾಂಗ್ರೆಸ್ ‌ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ 20ರಂದು ವಿಜಯನಗರದಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ,‌‌ ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ 'ಯುವ ಪರ್ವ' ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ‌ಸರ್ಕಾರ ಅಧಿಕಾರಕ್ಕೆ ಬಂದ ನಂತರ‌ ಕೊಟ್ಟ ಮಾತು ಉಳಿಸಿಕೊಂಡಿದೆ. ಯುವಕರಿಗೆ ಯುವನಿಧಿ ಮೂಲಕ ನೆರವಿಗೆ ನಿಂತಿದೆ. ಮಹಿಳೆಯರ ಪರವಾಗಿ ಐತಿಹಾಸಿಕ ಯೋಜನೆಗಳನ್ನು ತಂದು ಇತಿಹಾಸ ನಿರ್ಮಾಣ ಮಾಡಿರುವುದು ಕಾಂಗ್ರೆಸ್ ಪಕ್ಷ. ಉಚಿತ ಬಸ್, ಗೃಹಲಕ್ಷ್ಮಿ ಸೇರಿದಂತೆ ಅನೇಕ ಯೋಜನೆಗಳನ್ನು ದಳ, ಬಿಜೆಪಿಯವರು ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಯುವ ಕಾಂಗ್ರೆಸ್ ಪಕ್ಷ ನಾಯಕತ್ವ ಬೆಳೆಸುವ ಪ್ರಯೋಗ ಶಾಲೆ. ನೀವು ನಾಯಕರಾಗಿ ಬೆಳೆಯಬೇಕು ಎಂದರೆ ತಳಮಟ್ಟದಿಂದ ಕೆಲಸ ಮಾಡಬೇಕು. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಬೇಕು. ಯುವಕರಿಗೆ ನಿಮ್ಮ ಶಕ್ತಿಯ ಅರಿವಿಲ್ಲ‌. ಯಾರೋ ಮಾಡುವ ಟೀಕೆಗಳಿಗೆ ಹೆದರಬಾರದು ಎಂದರು.

ನಿಮ್ಮ ಏರಿಯಾ, ಬೂತ್ ಮಟ್ಟದಲ್ಲಿ ನೀವು ಪ್ರಬಲವಾಗಿ ಬೆಳೆಯಬೇಕು. ನೀವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಜನರ ಮನಸ್ಸನ್ನು ಗೆಲ್ಲಬೇಕು. ನಿಮ್ಮನ್ನು ನಾಯಕರನ್ನಾಗಿ ರೂಪಿಸಬೇಕು ಎನ್ನುವುದು ನನ್ನ ಗುರಿ ಎಂದು ಹೇಳಿದರು.

ಭೂಮಿ ಮೌಲ್ಯ ಹೆಚ್ಚಾಗಲಿದೆ: ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಯಲು ಮುಂದಾಗಿದ್ದೇವೆ. ಏಕೆಂದರೆ ಇಲ್ಲಿನ ಭೂಮಿ ಮೌಲ್ಯ ಹೆಚ್ಚಾಗಲಿದೆ. ಜನರ ಬದುಕು ಬದಲಾಗಲಿದೆ. ಇದು ನಮ್ಮ‌ ಜಿಲ್ಲೆ, ನಮ್ಮ ಸ್ವಾಭಿಮಾನ. ಬೆಂಗಳೂರಿಗೆ ನಾವು ಹೋಗುವುದು ತಪ್ಪಿ, ನಮ್ಮನ್ನೇ ಬಳಸಿಕೊಳ್ಳುವ ಕಾಲ ಮುಂದೆ ಬರಬೇಕು. ಸುರೇಶ್ ಅವರು ಸ್ಪರ್ಧಿಸುವ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಕರೆಯಲಾಗುತ್ತದೆ. ನಮ್ಮ ಹೆಸರನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.

ಗ್ರೇಟರ್ ಬೆಂಗಳೂರು ಕೈ ಬಿಡಲು ದೇವೇಗೌಡರ ಪತ್ರ: ಗ್ರೇಟರ್ ಬೆಂಗಳೂರು ಎಂದು ಮಾಡಲು ಹೊರಟಿದ್ದೇವೆ. ಇದನ್ನು ಕೈ ಬಿಡಿ ಎಂದು ದೇವೇಗೌಡರು, ಸಂಸದ ಮಂಜುನಾಥ್ ಅವರು ಪತ್ರ ಬರೆದಿದ್ದರು. ಈ ಹಿಂದೆ ಇದಕ್ಕೆ ಸಹಿ ಹಾಕಿದವರು ಕುಮಾರಸ್ವಾಮಿ‌. ಆದರೆ ಅವರಿಗೆ ಇದನ್ನು ಮುಂದುವರೆಸಲು ಆಗುವುದಿಲ್ಲ. ಈಗ ನಾನೇಕೆ ಅದನ್ನು ಡಿನೋಟಿಫಿಕೇಷನ್ ಮಾಡಲಿ?. ಕೇಸನ್ನು ಹಾಕಿಸಿಕೊಳ್ಳಲು ನಾನು ತಯಾರಿಲ್ಲ. ರೈತರಿಗೆ ನಾಲ್ಕು ಪಟ್ಟು ಪರಿಹಾರ ದೊರೆಯುವಂತೆ ಮಾಡುತ್ತೇನೆ. ಯೋಗೇಶ್ವರ್, ಇಕ್ಬಾಲ್ ಅವರೆಲ್ಲಾ ಸೇರಿ ನಿಮ್ಮ ಬದುಕನ್ನು ಭದ್ರ ಮಾಡುತ್ತೇವೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಏಕೆ ಒಂದೇ ಒಂದು ಜಿಲ್ಲಾಸ್ಪತ್ರೆ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವತನಕ ವಿಶ್ವವಿದ್ಯಾಲಯ ಕಟ್ಟಡವಿರಲಿಲ್ಲ ಎಂದು ಪ್ರಶ್ನಿಸಿದರು.

100 ಕಾಂಗ್ರೆಸ್ ಕಚೇರಿ: ರಾಜ್ಯಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲಾಗುತ್ತಿದೆ. ಬೆಂಗಳೂರಿನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭದಲ್ಲಿಯೇ ಇಲ್ಲಿಯೂ ನೆರವೇರಿಸಲಾಗುತ್ತದೆ. ಚನ್ನಪಟ್ಟಣ ತಾಲೂಕಿನ ಅಧ್ಯಕ್ಷರು ಎಲ್ಲರೂ ‌ಸೇರಿ 50 ಲಕ್ಷ‌ ರೂ ದೇಣಿಗೆ ಸಂಗ್ರಹ ಮಾಡಲಾಗುವುದು. ಕನಕಪುರದಲ್ಲಿ ಇರುವ ಜಾಗವನ್ನು ಹರಾಜಿನಲ್ಲಿ ಮಾರಾಟ ಮಾಡಿ ಆ ಹಣವನ್ನೂ ಸಹ ರಾಮನಗರ ಕಚೇರಿಗೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

DCM Dk Shivakumar
2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ: ಬಿಜೆಪಿ, ಜೆಡಿಎಸ್ ವಿರುದ್ಧ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಾಗ್ದಾಳಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com