
ಕಲಬುರಗಿ: ದೆಹಲಿ ಮತ್ತು ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ಅದೇ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ರೈಲ್ವೆ ಕಂಟ್ರೋಲ್ ರೂಮ್‌ಗೆ ಬೆದರಿಕೆ ಕರೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಘಟನೆ ಸಂಬಂಧ ಬೆದರಿಕೆ ಹಾಕಿದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಉತ್ತರ ಪ್ರದೇಶ ಮೂಲದ ದೀಪಸಿಂಗ್ ರಾಥೋಡ್ (33) ಎಂದು ಗುರ್ತಿಸಲಾಗಿದೆ,
ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಅನುಮಾನವಿದೆ ಎಂದು ಆರೋಪಿ ರೈಲ್ವೆ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾನೆ. ತಕ್ಷಣ ರೈಲ್ವೆ ರಕ್ಷಣಾ ಪಡೆ, ಸ್ಥಳೀಯ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ 40 ಕ್ಕೂ ಹೆಚ್ಚು ಸಿಬ್ಬಂದಿ ವಾಡಿ ರೈಲು ನಿಲ್ದಾಣದಲ್ಲಿ ರೈಲನ್ನು ತಡೆದು ಸಾವಿರಾರು ಪ್ರಯಾಣಿಕರನ್ನು ಕೆಳಗಿಳಿಸಿ ಬೆಳಗಿನ ಜಾವ 1.30 ರಿಂದ ಬೆಳಗಿನ ಜಾವ 4.30 ರವರೆಗೆ ರೈಲಿನ 22 ಬೋಗಿಗಳನ್ನು ತಪಾಸಣೆ ಮಾಡಿದ್ದಾರೆ.
ಬಳಿಕ ಇದು ಹುಸಿ ಬಾಂಬ್ ಕರೆ ಎಂಬುದು ಸಾಬೀತಾಗಿದೆ. ಗುಂತಕಲ್‌ಗೆ ಹೋಗುತ್ತಿದ್ದ ಆರೋಪಿ, ತನ್ನ ತಂದೆಯ ಫೋನ್ ಬಳಸಿ ಕರೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಬೆದರಿಕೆ ಕರೆ ಮಾಡಿರುವ ಆರೋಪಿ ನಂತರ ನಂತರ ಫೋನ್ ಅನ್ನು ಫ್ಲೈಟ್ ಮೋಡ್‌ಗೆ ಹಾಕಿ, ತನ್ನ ಗುರ್ತಿಕೆ ಸಿಗದಿರಲು ಯತ್ನಿಸಿದ್ದಾರೆ. ಆದರೆ, ಅಧಿಕಾರಿಗಳು ಟ್ರೂಕಾಲರ್ ಅಪ್ಲಿಕೇಶನ್ ಮೂಲಕ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಆರೋಪಿ ಸುಳ್ಳು ಮಾಹಿತಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.
Advertisement