ಬೆಂಗಳೂರು ಸೇರಿದಂತೆ ರಾಜ್ಯಾದ್ಯಾಂತ ವರುಣನ ಆರ್ಭಟ: ಸಿಡಿಲು ಬಡಿದು 7 ಮಂದಿ ಸಾವು; 4 ದಿನ ಯೆಲ್ಲೋ ಅಲರ್ಟ್
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಮಳೆಯಾಗಿದೆ. ಬಿರುಗಾಳಿ ಮತ್ತು ಗುಡುಗು ಸಹಿತ ಮಳೆಯು ಮೇ ಮಧ್ಯಭಾಗದ ವಿಶಿಷ್ಟ ಹವಾಮಾನ ಬದಲಾವಣೆಗಳ ಆರಂಭಕ್ಕೆ ಮುನ್ನುಡಿ ಬರೆದಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಹಿಂದೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಿತ್ತು. ರಾಜ್ಯದಲ್ಲಿ ಮಂಗಳವಾರ ಸಿಡಿಲಾಘಾತಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಇಬ್ಬರು, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.
ಬೇಸಿಗೆ ಮಳೆಯಿಂದ ಬಿಸಿಲು ಪ್ರದೇಶದ ಜಿಲ್ಲೆಗಳಲ್ಲಿ ಹಿತವಾದರೆ, ಕರಾವಳಿ, ಮಲೆನಾಡು, ಒಳನಾಡುಗಳಲ್ಲಿ ವಿವಿಧೆಡೆ ಬೆಳೆಗಳಿಗೆ ಹಾನಿಯಾಗಿದೆ. ಜೋರು ಗಾಳಿ ಮಳೆಗೆ ಬೆಳೆಗಳು ನೆಲಕಚ್ಚಿವೆ.
ಬಳ್ಳಾರಿ ಜಿಲ್ಲೆಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಜಮೀನಿನ ಕೆಲಸದಲ್ಲಿ ತೊಡಗಿದ್ದ ಬೀರಪ್ಪ (45) ಹಾಗೂ ಅವರ ಅಣ್ಣನ ಮಗ ಸುನೀಲ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಬಸನಗೌಡ (40) ಹಾಗೂ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ಯಂಕಪ್ಪ ಜಾಡಿ (45) ಮೃತರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ (47) ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ.
ಹಾವೇರಿಯಲ್ಲೂ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಹೊಲದ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದು 29 ವರ್ಷದ ಯುವ ರೈತ ಸುನೀಲ ಸುರೇಶಪ್ಪ ಕಾಳೇರ ಸಾವನಪ್ಪಿದ ಘಟನೆ ರಟ್ಟೀಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ನಡೆದಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ವಿಶೇಷವಾಗಿ ಸಂಜೆಯ ಸಮಯದಲ್ಲಿ ಲಘು ಮಳೆ ಮತ್ತು ಮೋಡ ಕವಿದ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಮತ್ತು ದಾವಣಗೆರೆಯಂತಹ ಜಿಲ್ಲೆಗಳು ಸಹ ಇದೇ ರೀತಿಯ ಪರಿಸ್ಥಿತಿಗಳನ್ನು ಕಾಣಬಹುದು.
ಭಾರತೀಯ ಹವಾಮಾನ ಇಲಾಖೆಯ ನೀಡಿರುವ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಆಂಧ್ರಪ್ರದೇಶ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆ, ಮಧ್ಯ ಮಹಾರಾಷ್ಟ್ರ ಮತ್ತು ತಮಿಳುನಾಡು ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ ಹಾಗೂ ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಶನಿವಾರದವರೆಗೂ ರಾಜ್ಯದ ಎಲ್ಲ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದ್ದು, ಭಾರಿ ಗಾಳಿ ಸಹಿತ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. 20ರವರೆಗೂ ಮಳೆ ಮುಂದುವರಿಯುವ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿದೆ.