ಕಾರ್ಪೋರೆಟ್ ವಂಚನೆ ಮತ್ತು ಕ್ರಿಮಿನಲ್ ಪಿತೂರಿ: ED ಮಾಜಿ ಅಧಿಕಾರಿ ವಿರುದ್ಧ FIR!

ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣದಲ್ಲಿ ಸೋಮಶೇಖರ್ ಅವರು ಎರಡನೇ ಆರೋಪಿಯಾಗಿದ್ದಾರೆ.
ಇಡಿ ಸಾಂದರ್ಭಿಕ ಚಿತ್ರ
ಇಡಿ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಪೀಣ್ಯ ಪೊಲೀಸರು ಜಾರಿ ನಿರ್ದೇಶನಾಲಯದ(ಇಡಿ) ಮಾಜಿ ಸಹಾಯಕ ನಿರ್ದೇಶಕರಾದ ಸೋಮಶೇಖರ್ ಎನ್ ಅವರ ವಿರುದ್ಧ ಎಫ್ಐಆರ್(ಸಂಖ್ಯೆ: 0263/2025, ದಿನಾಂಕ: 14-05-2025) ದಾಖಲಿಸಿದ್ದಾರೆ.

ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಂಬಿಕೆ ದ್ರೋಹ ಪ್ರಕರಣದಲ್ಲಿ ಸೋಮಶೇಖರ್ ಅವರು ಎರಡನೇ ಆರೋಪಿಯಾಗಿದ್ದಾರೆ. ಈ ಎಫ್ಐಆರ್ ಭಾರತೀಯ ದಂಡ ಸಂಹಿತೆಯ 120ಬಿ, 406 ಮತ್ತು 420ನೇ ವಿಧಿಗಳನ್ನು ಒಳಗೊಂಡಿದೆ.

ವಾಫೆ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಜಿ ನಿರ್ದೇಶಕರಾದ ಸುಹಾಸ್ ಆರ್ ಅವರು ಈ ದೂರು ದಾಖಲಿಸಿದ್ದು, ಸೋಮಶೇಖರ್ ಮತ್ತು ಅವರ ಮಗ ನಿರಂಜನ್ ಎಸ್ ಮಯೂರ್(ಆರೋಪಿ ನಂ 1) ಅವರ ವಿರುದ್ಧ ಕಂಪನಿಯ ಹಣ ಮತ್ತು ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡ ಆರೋಪ ಹೊರಿಸಿದ್ದಾರೆ.

ಸುಹಾಸ್ ಅವರು ತನ್ನನ್ನು ಸಂಸ್ಥೆಯ ಮಾರ್ಕೆಟಿಂಗ್ ನಿರ್ದೇಶಕರಾಗಿ ನೇಮಕ ಮಾಡಿದ್ದರೂ, ವಾಸ್ತವದಲ್ಲಿ ನಿಯಂತ್ರಣ ಸಂಪೂರ್ಣವಾಗಿ ಸೋಮಶೇಖರ್ ಬಳಿ ಇತ್ತು ಎಂದಿದ್ದಾರೆ. ಸೋಮಶೇಖರ್ ಆ ಅವಧಿಯಲ್ಲಿ ಸರ್ಕಾರಿ ಹುದ್ದೆಯಲ್ಲಿದ್ದುದರಿಂದ ಅವರು ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದೆ, ತನ್ನ ಮಗನ ಮೂಲಕ ಕಾರ್ಯಾಚರಿಸುತ್ತಿದ್ದರು ಎಂದು ಸುಹಾಸ್ ಹೇಳಿದ್ದಾರೆ.

ಡಿಸೆಂಬರ್ 2021ರಿಂದ 2023ರ ಕೊನೆಯವರೆಗೆ ವಾಫೆ ಇಂಜಿನಿಯರಿಂಗ್ ಸಂಸ್ಥೆಯಿಂದ ಅಶೋಕ ಎಂ ಎ (ಆರೋಪಿ ನಂ 4) ಅವರ ಎಸ್ಎಲ್ಎನ್ ಸಿಎನ್‌ಸಿಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಯಂತ್ರಗಳ ಖರೀದಿ ಮತ್ತು ಏರೋಸ್ಪೇಸ್ ಉತ್ಪಾದನೆಗಾಗಿ 2.15 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆದರೆ, ಖರೀದಿಗೆ ಆದೇಶ ಸಲ್ಲಿಸಲಾದ ಉಪಕರಣಗಳು ಮಾತ್ರ ಕಂಪನಿಗೆ ತಲುಪಲೇ ಇಲ್ಲ. ಬದಲಿಗೆ, ಆ ಹಣವನ್ನು ಹಾದಿ ತಪ್ಪಿಸಿ, ಕಂಪನಿಯ ಕಾರ್ಯಾಚರಣೆಗಳನ್ನು ವ್ಯವಸ್ಥಿತವಾಗಿ ಹಾಳುಗೆಡವಲಾಯಿತು. ಈ ಹಣ ವರ್ಗಾವಣೆಯಲ್ಲಿ ಸೋಮಶೇಖರ್ ಅವರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಅವರು ತಮ್ಮ ಪ್ರಭಾವವನ್ನು ಬಳಸಿ ನಿಯಂತ್ರಣ ಸಾಧಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ಎಫ್‌ಐಆರ್‌ನಲ್ಲಿ ಸುಹಾಸ್ ತನ್ನ ಮೇಲೆ ಒತ್ತಡ ಹೇರಿ, ಅವರು ವೃತ್ತಿಪರ ಮತ್ತು ವೈಯಕ್ತಿಕ ಸಮಸ್ಯೆಗಳು ಉಂಟಾಗಬಹುದು ಎಂದು ಗಾಬರಿಗೊಳ್ಳುವಂತೆ ಮಾಡಿ, ಹಲವಾರು ಚೆಕ್‌ಗಳಿಗೆ ಸಹಿ ಹಾಕುವಂತೆ ಮಾಡಲಾಯಿತು ಎಂದಿದ್ದಾರೆ. ಇದೇ ವೇಳೆ, ಆರೋಪಿಗಳು ಇಂಡ್ ಆ್ಯಕ್ಸಿಸ್ ಕನ್ಸಲ್ಟನ್ಸಿ ಸರ್ವಿಸಸ್ ಮತ್ತು ಮೈಲಾರ್ ಪ್ಯಾಕೇಜಿಂಗ್ ಎಂಬ ಶೆಲ್ ಸಂಸ್ಥೆಗಳನ್ನು ನಿರ್ಮಿಸಿ, ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಂತಿಮವಾಗಿ ವಾಫೆ ಇಂಜಿನಿಯರಿಂಗ್ ಸಂಸ್ಥೆಗೆ 80 ಲಕ್ಷ ರೂಪಾಯಿಗೂ ಹೆಚ್ಚಿನ ನಷ್ಟ ಉಂಟಾಗುವಂತೆ ಮಾಡಿದ್ದಾರೆ ಎಂದು ಎಫ್ಐಆರ್ ಹೇಳಿದೆ.

ಮುಖ್ಯವಾಗಿ, ಪೊಲೀಸರು ಈಗ ಸೋಮಶೇಖರ್ ಜಾರಿ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಈ ಆರ್ಥಿಕ ಅವ್ಯವಹಾರವನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಆಯಾಮದಲ್ಲಿ ತನಿಖೆ ನಡೆದು, ಆರೋಪ ಸಾಬೀತಾದರೆ, ಅದರ ಪರಿಣಾಮಗಳು ತೀವ್ರವಾಗಿರಬಹುದು. ಇದರಿಂದ ಸಾಂಸ್ಥಿಕ ಹಂತಗಳಲ್ಲಿ ಪರಿಶೀಲನೆ ನಡೆಸಬೇಕಾಗುವ ಸಾಧ್ಯತೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com