
ಬೆಂಗಳೂರು: ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೊಬೈಲ್ ಅಂಗಡಿಯೊಂದಕ್ಕೆ ಕನಿಷ್ಠ 85 ಮೊಬೈಲ್ ಫೋನ್‌ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೊಂಗಸಂದ್ರ ಮುಖ್ಯ ರಸ್ತೆಯಲ್ಲಿರುವ ಸೇವಾ ಹೆಲ್ತ್ ಕೇರ್ ಎದುರಿನ ಹನುಮಾನ್ ಟೆಲಿಕಾಂ ಮೊಬೈಲ್ ಅಂಗಡಿಯಲ್ಲಿ ಈ ದರೋಡೆ ನಡೆದಿದೆ. ಮೇ 9 ರಂದು ಬೆಳಗಿನ ಜಾವ 1.30 ರಿಂದ 3 ಗಂಟೆಯ ನಡುವೆ, ಕಳ್ಳ ಗೋಡೆಯನ್ನು ಕೊರೆದು ಮಾಸ್ಕ್ ಮಾತ್ರ ಧರಿಸಿ ತೆವಳುತ್ತಾ ಒಳಗೆ ಬಂದಿದ್ದಾನೆ. ಈ ಕೃತ್ಯವು ಪಕ್ಕದ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನೆರೆಯ ಅಂಗಡಿಯ ಮಾಲೀಕ ವಾಸನ್ ರಾಮ್, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ದರೋಡೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ರಾಜಸ್ಥಾನದಲ್ಲಿದ್ದ ಮೊಬೈಲ್ ಅಂಗಡಿ ಮಾಲೀಕ ದಿನೇಶ್‌ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಸ್ಸಾಂ ಮೂಲದ ಕಳ್ಳನನ್ನು ಬಂಧಿಸಿ, ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಕದ್ದ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಕ್ಯಾಶ್ ಬಾಕ್ಸ್ ನಿಂದ 30,000 ರೂಪಾಯಿಗಳನ್ನು ತೆಗೆದುಕೊಂಡಿದ್ದಾನೆ. ನಾನು ಮನೆಯಲ್ಲಿ ಇಲ್ಲದ ಕಾರಣ, ವಾಸನ್ ರಾಮ್ ಪೊಲೀಸರಿಗೆ ದೂರು ನೀಡಿದರು. ನನ್ನ ಅಂಗಡಿಯ ಹಿಂದೆ ಖಾಲಿ ಜಾಗವಿದೆ. ಕಳ್ಳನು ರಂಧ್ರ ಕೊರೆಯಲು ಉಳಿ ಮತ್ತು ಸುತ್ತಿಗೆಯನ್ನು ಬಳಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರವೇ ಅವನು ಸಂಪೂರ್ಣವಾಗಿ ಬೆತ್ತಲೆಯಾಗಿದ್ದಾನೆಂದು ನನಗೆ ಅರಿವಾಯಿತು ಎಂದು ದಿನೇಶ್ ತಿಳಿಸಿದ್ದಾರೆ.
ಕಳ್ಳ ಉದ್ದೇಶಪೂರ್ವಕವಾಗಿ ಬೆತ್ತಲಾಗಿರಲಿಲ್ಲ. ರಂಧ್ರದ ಮೂಲಕ ನುಸುಳಲು ಪ್ರಯತ್ನಿಸುವಾಗ ಅವನ ಬಟ್ಟೆಗಳು ನಿರಂತರವಾಗಿ ಸಿಕ್ಕಿಬಿದ್ದಿದ್ದವು. ಬಟ್ಟೆಗಳು ಸಿಕ್ಕಿಕೊಂಡು ಅಡ್ಡಿಯಾಗುತ್ತಿದ್ದರಿಂದ ಆತ ಅವುಗಳನ್ನು ತೆಗೆದು ಅಂಗಡಿಯೊಳಗೆ ಪ್ರವೇಶಿಸಿದ್ದ, ಹೊರಗೆ ಹೋದ ನಂತರ, ಅವನು ತನ್ನ ಬಟ್ಟೆಗಳನ್ನು ಮತ್ತೆ ಧರಿಸಿ ಅಲ್ಲಿಂದ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನ ಚಲನವಲನಗಳು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅವನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement