
ಬೆಂಗಳೂರು: ಇತ್ತೀಚಿನ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರಿಂದ ತಕ್ಷಣದಿಂದಲೇ ಟರ್ಕಿ ಮತ್ತು ಅಜರ್‌ಬೈಜಾನ್‌ಗೆ ಬಟ್ಟೆ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಲು ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ (BWCMA) ನಿರ್ಧರಿಸಿದೆ. ಈ ನಿಟ್ಟಿನಲ್ಲಿ ತಮ್ಮ ಸರ್ವಾನುಮತದ ಒಮ್ಮತವನ್ನು ಪ್ರಕಟಿಸಿದೆ.
ರಾಷ್ಟ್ರೀಯ ಭಾವನೆ ಮತ್ತು ವ್ಯಾಪಾರಿ ಸಮುದಾಯದ ಹಿತಾಸಕ್ತಿಯ ಬದ್ಧತೆಗೆ ಅನುಗುಣವಾಗಿ ಮಾಲೋಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ಜವಳಿ ವ್ಯಾಪಾರ ವಲಯದಲ್ಲಿ ಜವಾಬ್ದಾರಿಯುತ ಪಾಲುದಾರರಾಗಿ, ಅಗತ್ಯವಿದ್ದಾಗ ತಾತ್ವಿಕ ನಿಲುವುಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಎಂಬುದರಲ್ಲಿ ನಂಬಿಕೆ ಹೊಂದಿರುವುದಾಗಿ BWCMA ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟರ್ಕಿ ಮತ್ತು ಅಜರ್ ಬೈಜಾನ್ ನಿಂದ ಬಟ್ಟೆ ಆಮದು ಮತ್ತು ರಫ್ತನ್ನು ನಿಲ್ಲಿಸಲು, ಮಧ್ಯವರ್ತಿಗಳು ಅಥವಾ ಮೂರನೇ ವ್ಯಕ್ತಿಯ ದೇಶಗಳ ಮೂಲಕ ಪರೋಕ್ಷವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಲು ನಮ್ಮ ಎಲ್ಲಾ ಸದಸ್ಯರು ಒಪ್ಪಿಕೊಂಡಿದ್ದಾರೆ. ಈ ನಿರ್ಣಯವು ಮುಂದಿನ ಸೂಚನೆಯವರೆಗೂ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.
BWCMA ಬೆಂಗಳೂರಿನಾದ್ಯಂತ ಸುಮಾರು 3,000 ಸಗಟು ಅಂಗಡಿಗಳ ಸಂಘವಾಗಿದೆ. ಈ ದೇಶಗಳೊಂದಿಗೆ ಕೋಟ್ಯಂತರ ರೂ. ಮೌಲ್ಯದ ವ್ಯಾಪಾರ ನಡೆಯುತ್ತಿದೆ. ಅಲ್ಲಿಂದ ಸಾಕಷ್ಟು ಬಟ್ಟೆ ಸಾಮಗ್ರಿಗಳು ಬರುತ್ತವೆ ಮತ್ತು ರಫ್ತು ಮಾಡಲ್ಪಡುತ್ತವೆ" ಎಂದು ಪಿರ್ಗಲ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
"ಆಪರೇಷನ್ ಸಿಂಧೂರ್' ನಂತರ ಈ ಎರಡು ದೇಶಗಳು ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿವೆ. ನಾವು ಭಾರತ ಸರ್ಕಾರದ ಜೊತೆ ನಿಲ್ಲುತ್ತೇವೆ, ದೇಶವು ಮೊದಲು ಬರುತ್ತದೆ ಎಂದು ಅವರು ಹೇಳಿದ್ದಾರೆ.
ಟರ್ಕಿಯಲ್ಲಿ ಭೂಕಂಪ ಸಂಭವಿಸಿದಾಗ ಮಾನವೀಯ ನೆರವಿನ ಕಾರ್ಯದಲ್ಲಿ ಮೊದಲ ರಾಷ್ಟ್ರವಾಗಿ ಭಾರತ ಕಾರ್ಯನಿರ್ವಹಿಸಿತು. ಅದನ್ನು ಟರ್ಕಿ ನೆನಪಿಸಿಕೊಳ್ಳದೆ ಪಾಕಿಸ್ತಾನದ ಪರವಾಗಿ ನಿಂತಿದ್ದಾರೆ. ನಮ್ಮ ಜನರನ್ನು ಕೊಲ್ಲಲು ಭಯೋತ್ಪಾದಕರನ್ನು ಕಳುಹಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆ ದೇಶಗಳೊಂದಿಗೆ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ
Advertisement