
ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ–2025 ಕ್ಕೆ ಸಂಬಂಧಿಸಿದಂತೆ, ಒಳಮೀಸಲಾತಿ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದ್ದು, ಮನೆ ಮನೆ ಭೇಟಿ ಸಮೀಕ್ಷೆಯು ಮೇ 17 ರಿಂದ 25 ವರೆಗೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಜಿಲ್ಲೆಯಲ್ಲಿ ನಡೆದಿರುವ ಸಮೀಕ್ಷೆ ಕಾರ್ಯದ ಅವಧಿಯನ್ನು ಮೇ. 28 ರವರೆಗೆ ವಿಸ್ತರಿಸಲಾಗಿದೆ.
ಮತಗಟ್ಟೆವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಅವಧಿಯನ್ನು ಮೇ 26 ರಿಂದ 28 ಮೇ ವರೆಗೂ ನಿಗದಿಗೊಳಿಸಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡುವ ಅವಧಿಯನ್ನು ಮೇ 19 ರಿಂದ ಮೇ 28 ರವರೆಗೆ ನಿಗದಿಗೊಳಿಸಿದೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್ ಸಿ ಒಳ ಮೀಸಲು ಏಕಸದಸ್ಯ ವಿಚಾರಣಾ ಆಯೋಗದ ಮುಖ್ಯಸ್ಥ ನ್ಯಾ.ಡಾ.ಎಚ್.ಎನ್.ನಾಗಮೋಹನ್ ದಾಸ್ ಅವರು, ಅನೇಕ ಸಂಘಟನೆಗಳು ಹಾಗೂ ಹಲವು ಜಿಲ್ಲಾಧಿಕಾರಿಗಳು ಮನೆ ಮನೆಗೆ ಭೇಟಿ ಮಾಡಿ ಸಮೀಕ್ಷೆ ನಡೆಸಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿದೆ ಎಂದು ಹೇಳಿದರು.
ಮೇ 5ರಿಂದ ಶುರುವಾಗಿರುವ ಸಾಕ್ಷಾತ್ ಸಮೀಕ್ಷೆಯಲ್ಲಿ ಮೇ 15ರವರೆಗೆ ಶೇಕಡ 73.72ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 31 ಜಿಲ್ಲೆಗಳಲ್ಲಿ 1841258, ಬಿಬಿಎಂಪಿ ವ್ಯಾಪ್ತಿಯಲ್ಲಿ 55027 ಕುಟುಂಬಗಳ ಸಮೀಕ್ಷಾ ಕಾರ್ಯಮುಗಿದಿದ್ದರೆ, 31 ಜಿಲ್ಲೆಗಳ 970233, ಬಿಬಿಎಂಪಿ ವ್ಯಾಪ್ತಿಯಲ್ಲಿ 1326323 ಸೇರಿ ಒಟ್ಟು 11032556 ಎಸ್ ಸಿಯೇತರ ಕುಟುಂಬಗಳನ್ನು ಭೇಟಿ ಮಾಡಲಾಗಿದೆ. ಶುಕ್ರವಾರ ಸಂಜೆಯ ವೇಳೆಗೆ 20 ಲಕ್ಷ ಎಸ್ ಸಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಳ್ಳಲಿದೆ.
ಮನೆ ಮನೆಗೆ ಭೇಟಿ ಅವಧಿ ವಿಸ್ತರಣೆ, ವಿಶೇಷ ಶಿಬಿರ ಹಾಗೂ ಆನ್ ಲೈನ್ ನಲ್ಲಿ ಸಲ್ಲಿಕೆ ದಿನಾಂಕ ಪರಿಷ್ಕರಿಸಿದ್ದರೂ ಸುಪ್ರೀಂ ಕೋರ್ಟ್ ನಿಗದಿಪಡಿಸಿ ವೈಜ್ಞಾನಿಕ, ನಿಖರ ದತ್ತಾಂಶಗಳ ಆಧಾರದಲ್ಲಿ ಎಸ್ ಸಿ ಮೀಸಲು ವರ್ಗೀಕರಣ ಶಿಫಾರಸು ಸಹಿತ ನಿಗದಿತ ಕಾಲಮಿತಿಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಉದ್ಯೋಗಕ್ಕೆ ಸಂಬಂಧಿಸಿದಂತೆ 43ರ ಪೈಕಿ 40 ಇಲಾಖೆಗಳು ಮಾಹಿತಿ ನೀಡಿವೆ. ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ರಾಜಕೀಯ ಪ್ರಾತಿನಿಧ್ಯದ ಮಾಹಿತಿ ಸಂಗ್ರಹಿಸಲಾಗಿದೆ. ವಿವಿಧ ತಜ್ಞರ ತಂಡಗಳು ವಿಶ್ಲೇಷಣಾ ಕಾರ್ಯದಲ್ಲಿ ತೊಡಗಿವೆ. ಅರೆ ಬರೆ ಮಾಹಿತಿ, ವಿಳಂಬ ಮಾಡಿದ ಇಲಾಖೆಗಳಿಗೆ ಎಚ್ಚರಿಕೆ, ನೋಟಿಸ್ ಕೂಡ ನೀಡಲಾಗಿದೆ. ಎಸ್ಸಿಯೇತರರು ಅಂದರೆ ಯಾವುದೇ ಮಾಹಿತಿ ಪಡೆಯುವುದು ಬೇಡ ಅಂದಿದ್ದೇವೆ. ಸಮೀಕ್ಷೆ ಮುಗಿದ ಮೇಲೆ ದತ್ತಾಂಶ ವಿಶ್ಲೇಷಣೆ ಮಾಡುತ್ತೇವೆ. ಮಾನದಂಡದ ಪ್ರಕಾರ ಏನೆಲ್ಲಾ ವರ್ಗೀಕರಣ ಆಗಬೇಕು ಅದನ್ನು ಮಾಡಲಿದ್ದೇವೆ. ಇನ್ನು ಯಾವುದೇ ವಿಳಂಬ ಆಗದಂತೆ ವರದಿ ನೀಡುತ್ತೇವೆ.
ಆದಿ ಕರ್ನಾಟಕ, ಆದಿ ಆಂಧ್ರ, ಆದಿ ಜಾಂಬವ ಸಂಬಂಧ ಜಾತಿ ಹೆಸರು ಹೇಳಬೇಕು. ಒಂದು ವೇಳೆ ಆದಿ ಕರ್ನಾಟಕ ಅಂದರೆ ಈ 101ರಲ್ಲಿ ಯಾವ ಉಪಜಾತಿ ಎಂದು ಹೇಳಬೇಕು. ಹೇಳಿಲ್ಲವಾದರೆ ಹಾಗೇ ನಮೂದು ಮಾಡಲಾಗುತ್ತದೆ. ಕೆಲ ಮಾನದಂಡದ ಆಧಾರದ ಮೇಲೆ ನಾವು ಮುಂದೆ ಆದಿ ಕರ್ನಾಟಕ, ಆದಿ ಆಂಧ್ರದ ಜಾತಿಯವರನ್ನು ಯಾವ ಉಪಜಾತಿ ಎಂದು ತೀರ್ಮಾನಿಸುತ್ತೇವೆ.
ಮೇ 28 ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವ ವಿಶ್ವಾಸ ನಮಗಿದೆ. ಸಮೀಕ್ಷೆಯ ಅವಧಿ ವಿಸ್ತರಣೆಯು ವಿಳಂಬ ಹಿನ್ನೆಲೆಯಲ್ಲಿ ಮಾಡಲಾಗಿಲ್ಲ, ಬದಲಿಗೆ ಶೇ.100ರಷ್ಟು ಸೇರ್ಪಡೆ ಮತ್ತು ದೃಢೀಕರಣವನ್ನು ಖಾತರಿಪಡಿಸುವ ಸಲುವಾಗಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಮೀಕ್ಷೆಯು ರಾಷ್ಟ್ರೀಯ ಗಮನ ಸೆಳೆದಿದ್ದು, ಕೇಂದ್ರ ಅಧಿಕಾರಿಗಳು ಕರ್ನಾಟಕದ ವಿಧಾನದ ಬಗ್ಗೆ ವಿವರಗಳನ್ನು ಕೋರಿದ್ದಾರೆ, ನಾವು ಈಗಾಗಲೇ ನಮ್ಮ ಸಮೀಕ್ಷೆ ನಿಯತಾಂಕಗಳು ಮತ್ತು ಪ್ರಗತಿ ಬಗ್ಗೆ ಕೇಂದ್ರದೊಂದಿಗೆ ಮಾಹಿತಿ ಹಂಚಿಕೊಂಡಿದ್ದೇವೆಂದು ತಿಳಿಸಿದರು.
ಸಮೀಕ್ಷೆಗೆ ಸಹಕರಿಸದಿದ್ರೆ ನೀರು, ಕರೆಂಟ್ ಯಾಕೆ ಕಟ್ ಮಾಡ್ಬಾರದು?
ಬೆಂಗಳೂರಿನಲ್ಲಿ ಕೇವಲ ಶೇ.36ರಷ್ಟು ಮಾತ್ರ ಸಮೀಕ್ಷೆ ಆಗಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಸಹಕರಿಸುತ್ತಿಲ್ಲ. ಅವರ ಮಾಹಿತಿಯನ್ನೇ ನೀಡಲ್ಲ ಎಂದರೆ ಅವರಿಗೆ ನೀರು, ಕರೆಂಟ್ ಕಟ್ ಮಾಡಿದರೆ ಹೇಗೆ? ಅವರು ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಎಂದರೆ ನೀರು, ಕರೆಂಟ್ ಏಕೆ ಬೇಕು? ಈಗಾಗಲೇ ಬಿಬಿಎಂಪಿಗೆ ಸೂಚನೆ ಕೊಟ್ಟಿದ್ದೇವೆ. ಸಮೀಕ್ಷೆ ಸಹಕರಿಸಲು ಎಚ್ಚರಿಕೆ ಕೊಡುವಂತೆ ಲಿಖಿತವಾಗಿ ಬಿಬಿಎಂಪಿಗೆ ಸೂಚಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ತೆರೆಯಲು ಸಹ ಸೂಚಿಸಿದ್ದೇವೆ. ಖಾಸಗಿ ಶಾಲೆಯ ಶಿಕ್ಷಕರನ್ನ ಸಮೀಕ್ಷೆಗೆ ನೇಮಿಸಲು ಸೂಚಿಸಿದ್ದೇವೆ ಎಂದು ತಿಳಿಸಿದರು.
Advertisement