
ಬೆಂಗಳೂರು: ಬಿಡದಿ ಹೋಬಳಿ ಭದ್ರಾಪುರ ಗ್ರಾಮದಲ್ಲಿ ನಡೆದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಸಾವಿನ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಲಭ್ಯವಾಗಿದ್ದು ಅತ್ಯಾಚಾರ ನಡೆದಿಲ್ಲವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬಿಡದಿ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹದ 32 ವಿವಿಧ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿತ್ತು. ಕೂಲಂಕುಶವಾಗಿ ಪರೀಕ್ಷೆ ನಡೆಸಿರುವ ತಜ್ಞರು, ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ ಎಂದು ವರದಿಯಲ್ಲಿ ನಮೂದಿಸಿದ್ದಾರೆ. 10 ಮಂದಿ ಶಂಕಿತರಿದ್ದಾರೆ. ಆದರೆ, ಅವರ ಪಾತ್ರ ಸಾಬೀತಿಗೆ ಸಾಕ್ಷ್ಯಾಧಾರ ಸಿಕ್ಕಿಲ್ಲ. ಬಾಲಕಿಯ ತಲೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಆದರೆ, ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಗಾಗಿ ಕಾಯಬೇಕಿದೆ ಎಂದು ಹೇಳಿದ್ದಾರೆ.
ಮೃತ ಬಾಲಕಿಯನ್ನು ನೋಡಿದರೆ, ರೈಲು ಡಿಕ್ಕಿ ಹೊಡೆದಂತೆ ಕಾಣುತ್ತಿದೆ. ಆದರೆ, ಬಾಲಕಿಯ ದೇಹದ ಮೇಲಿನ ಗಾಯಗಳನ್ನು ಸಿಗರೇಟ್ ನಿಂದ ಸುಟ್ಟಿರುವುದು, ಕಚ್ಚಿರುವುದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆ ರೀತಿಯ ಯಾವುದೇ ಗಾಯಗಳು ಕಂಡು ಬಂದಿಲ್ಲ. ಸುಳ್ಳು ಸುದ್ದಿ ಹರಡುವವರ ನಾವು ಕ್ರಮ ಕೈಗೊಳ್ಳುತ್ತೇವೆಂದು ತಿಳಿಸಿದರು.
ಈ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ಮಾಡಬೇಕಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವ ಹೊತ್ತಿಗೆ, ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು ಎಂದು ಹೇಳಿದರು.
ಮಂಚನಾಯಕನಹಳ್ಳಿಯ ಹಕ್ಕಿ-ಪಿಕ್ಕಿ ಕಾಲೋನಿಯಲ್ಲಿ ವಾಸಿಸುತ್ತಿದ್ದ ಬಾಲಕಿ ಮೇ 11 ರಂದು ಸಂಜೆ 5 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಳು. ಸಂತ್ರಸ್ತೆ ತಾವರೆಕೆರೆಯ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಳು. ರಜೆಗಾಗಿ ಮನೆಗೆ ಬಂದಿದ್ದಳು. ಆದರೆ, ಬಾಲಕಿಯ ಶವ ಸೋಮವಾರದಂದು ಭದ್ರಾಪುರ ಗ್ರಾಮದ ಬೆಂಗಳೂರು-ಮೈಸೂರು ರೈಲು ಹಳಿಯ ಪಕ್ಕದಲ್ಲಿ ಪತ್ತೆಯಾಗಿತ್ತು. ದಾರಿಹೋಕರು ಆಕೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅತ್ಯಾಚಾರ ಅನುಮಾನ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಶವವನ್ನು ಅಂತ್ಯಕ್ರಿಯೆ ಮಾಡಿರಲಿಲ್ಲ. ಬುಧವಾರ ಮಧ್ಯಾಹ್ನದವರೆಗೆ ಶವವನ್ನು ಮನೆಯ ಹೊರಗೆ ಇರಿಸಿದ್ದರು. ಹೀಗಾಗಿ ಅದು ಕೊಳೆಯಲು ಪ್ರಾರಂಭಿಸಿತ್ತು. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಅವರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ ಪಲ್ಲವಿ ಅವರು ಕುಟುಂಬವನ್ನು ಭೇಟಿ ಮಾಡಿ ಶವವನ್ನು ಅಂತ್ಯಕ್ರಿಯೆ ಮಾಡುವಂತೆ ಮನವೊಲಿಸಿದ್ದರು. ಕುಟುಂಬಕ್ಕೆ 4.25 ಲಕ್ಷ ರೂ. ಪರಿಹಾರ ನೀಡಲಾಯಿತು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೂ ಕೂಡ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಬಾಲಕಿ ಹತ್ಯೆ ಬಳಿಕ ಬಾಲಕಿಯ ದಾಯಿ ಅತ್ಯಾಚಾರ ಮತ್ತು ಕೊಲೆ ಶಂಕೆಯ ದೂರು ದಾಖಲಿಸಿದ್ದರು, ದೂರು ಹಿನ್ನೆಲೆಯಲ್ಲಿ ಪೊಲೀಸರು ಬಿಎನ್‌ಎಸ್ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
Advertisement