
ರಾಮನಗರ: ಬಿಡದಿ ಸಮೀಪ ಮೂಕ ಬಾಲಕಿ ಕೊಲೆಯಾಗಿದೆ. ಭಾನುವಾರ ಸಂಜೆಯೇ ಕಣ್ಮರೆಯಾಗಿದ್ದು ಬಾಲಕಿ, ಸೋಮವಾರ ಬೆಳಗ್ಗೆ ಭದ್ರಾಪುರ ಗ್ರಾಮದ ಬಳಿಯಿರುವ ರೈಲ್ವೆ ಹಳಿಯ ಪಕ್ಕದ ಹಳ್ಳದಲ್ಲಿ ಶವ ಪತ್ತೆಯಾಗಿತ್ತು.
ಮಾತು ಬಾರದ, ಕಿವಿ ಕೇಳಿಸದ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆಯೇ ಎಂಬುವುದು ಗೊತ್ತಾಗಲಿದೆ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಕೊಲೆ ಹಂತಕರನ್ನು ಬಂಧಿಸುವವರೆಗೂ ಬಾಲಕಿಯ ಅಂತ್ಯ ಸಂಸ್ಕಾರ ಮಾಡಲ್ಲ ಎಂದು ಪೋಷಕರು ಪ್ರತಿಭಟನೆ ನಡೆಸಿದರು. ಬಳಿಕ ಅಧಿಕಾರಿಗಳು ಪೋಷಕರನ್ನು ಸಮಾಧಾನ ಪಡಿಸಿ ಬುಧವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಬಾಲಕಿ ಹತ್ಯೆ ಪ್ರಕರಣ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪೋಷಕರಿಗೆ ಸಾಂತ್ವಾನ ಹೇಳಿ 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಯಾರೇ ಇರಲಿ ಕ್ರಮವಹಿಸಬೇಕು. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಿ ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಇಂತಹ ಪ್ರಕರಣಗಳು "ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಸೂಚಿಸುತ್ತದೆ ಎಂದು ಜೆಡಿಎಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆರೋಪಿಸಿದೆ.
Advertisement