GST ಸಂಗ್ರಹದಲ್ಲಿ ಕರ್ನಾಟಕವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಕಳೆದ ವರ್ಷ ತೆರಿಗೆ ಸಂಗ್ರಹಣೆಗೆ 1,03,000 ಕೋಟಿಗಳ ಗುರಿ ನಿಗದಿಪಡಿಸಲಾಗಿದ್ದು, ಹೆಚ್ಚುವರಿ 17,000 ಕೋಟಿಗಳ ತೆರಿಗೆ ಸಂಗ್ರಹಣೆಯನ್ನು ಸಾಧಿಸಲಾಗಿತ್ತು.
ಎಂ ಸಿದ್ದರಾಮಯ್ಯ
ಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಜಿಎಸ್‌ಟಿ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಪ್ರಯತ್ನಿಸಬೇಕು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಮಯ್ಯ ಶನಿವಾರ ಸೂಚನೆ ನೀಡಿದರು.

ಕರ್ನಾಟಕ ವಾಣಿಜ್ಯ ತೆರಿಗೆ ಸೇವೆಗಳ [ಅಧಿಕಾರಿಗಳ] ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕರ್ನಾಟಕ ವಾಣಿಜ್ಯ ತೆರಿಗೆಗಳ ಸೇವಾ ಸಂಘವು 50 ವರ್ಷಗಳ ಮೈಲಿಗಲ್ಲನ್ನು ಸಾಧಿಸಿದ್ದು, ಇದಕ್ಕಾಗಿ ಶ್ರಮಿಸಿದ ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆಗಳು. ನಿಮ್ಮೆಲ್ಲರ ಸಹಕಾರದಿಂದ ನಾನು ಆರ್ಥಿಕ ಇಲಾಖೆಯ ಜವಾಬ್ದಾರಿಯನ್ನು ದೀರ್ಘ ಕಾಲದವರೆಗೆ ನಿಭಾಯಿಸಲು ಸಾಧ್ಯವಾಯಿತು. ನಾನು ಹಣಕಾಸು ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆಯ ಕಾರ್ಯಭಾರವನ್ನು ನಿರ್ವಹಿಸಿದ್ದೇನೆ. ಈಗ ಸರ್ಕಾರದ ಯಶಸ್ವಿ ಆಡಳಿತಕ್ಕೆ ಎರಡು ವರ್ಷ ಪೂರೈಸಿದ್ದು, ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದಿು ಹೇಳಿದರು.

ತೆರಿಗೆ ಸಂಗ್ರಹಣೆಯಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇದಕ್ಕಾಗಿ ಎಲ್ಲ ಅಧಿಕಾರಿಗಳಿಗೆ ಅಭಿನಂದನೆಗಳು. ಜವಾಬ್ದಾರಿಯುತ ಅಧಿಕಾರಿಗಳಿಂದ ಉತ್ತಮ ತೆರಿಗೆ ಸಂಗ್ರಹಣೆಯಾಗುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಹೆಚ್ಚಿನ ಮೊತ್ತದ ತೆರಿಗೆ ಸಂಗ್ರಹಣೆ ಸಾಧ್ಯವಾಗುತ್ತದೆ. ಕಳೆದ ವರ್ಷ ತೆರಿಗೆ ಸಂಗ್ರಹಣೆಗೆ 1,03,000 ಕೋಟಿಗಳ ಗುರಿ ನಿಗದಿಪಡಿಸಲಾಗಿದ್ದು, ಹೆಚ್ಚುವರಿ 17,000 ಕೋಟಿಗಳ ತೆರಿಗೆ ಸಂಗ್ರಹಣೆಯನ್ನು ಸಾಧಿಸಲಾಗಿತ್ತು. ಈ ವರ್ಷ ತೆರಿಗೆ ಸಂಗ್ರಹಣೆಗೆ 1,20,000 ಕೋಟಿಗಳ ಗುರಿಯನ್ನು ನೀಡಲಾಗಿದ್ದು, ಅಧಿಕಾರಿಗಳು ಗುರಿಮೀರಿ ಸಾಧನೆ ಮಾಡಬೇಕಿದೆ.

ಈ ವರ್ಷ 4,09,000 ಕೋಟಿ ರೂ. ಗಳ ಬಜೆಟ್ ಮಂಡಿಸಲಾಗಿದ್ದು, ಇದರಲ್ಲಿ ಗ್ಯಾರಂಟಿ ಯೋಜನೆಗಳಿಗೆ 50,018 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈವರೆಗೆ 90,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ಗ್ಯಾರಂಟಿಗಳಿಗೆ ಹಣ ಪೂರೈಸಲಾಗದೇ ರಾಜ್ಯ ಆರ್ಥಿಕ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷದವರು ಟೀಕಿಸಿದ್ದರು. ಆದರೆ ನಾವು ಈ ಸವಾಲನ್ನು ಯಶಸ್ವಿಯಾಗಿ ಗೆದ್ದಿದ್ದೇವೆ. ಸರ್ಕಾರದ ಈ ಯಶಸ್ಸಿನ ಹಿಂದೆ ಇಲಾಖೆಯ ಅಧಿಕಾರಿಗಳ ಶ್ರಮ ಅಡಗಿದೆ.

ನಾನು ಹಣಕಾಸಿನ ಮಂತ್ರಿಯಾಗಿದ್ದರೂ ಸಹ ತೆರಿಗೆ ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ. ಆದರೆ ಅಧಿಕಾರಿಗಳು ಇಲಾಖೆಗೆ ನೀಡಿರುವ ತೆರಿಗೆ ಸಂಗ್ರಹಣೆಯ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಬೆಂಗಳೂರಿನಲ್ಲಿ ತೆರಿಗೆ ಸೋರಿಕೆ ಹೆಚ್ಚಿನ ಮಟ್ಟದಲ್ಲಿದೆ. ಕರ್ನಾಟಕ ತೆರಿಗೆ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿದೆ. ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಲು ಸರ್ಕಾರ ಬದ್ಧವಾಗಿದೆ.

ತೆರಿಗೆ ಅಧಿಕಾರಿಗಳ ಸಂಘದ ಬೇಡಿಕೆಗಳನ್ನು ಸರ್ಕಾರ ಪರಿಶೀಲಿಸಲಾಗುವುದು. ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಎಂದಿಗೂ ಸ್ಪಂದಿಸುತ್ತದೆ. ಅಂತೆಯೇ ಕರ್ತವ್ಯಲೋಪ ಎಸಗುವ ಅಧಿಕಾರಿ ನೌಕರರ ಮೇಲೆ ಶಿಸ್ತಿನ ಕ್ರಮವನ್ನೂ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಎಂ ಸಿದ್ದರಾಮಯ್ಯ
ತೆರಿಗೆ ಸಂಗ್ರಹದ ಗುರಿ ಮುಟ್ಟಲೇಬೇಕು, ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com