
ಬೆಂಗಳೂರು: ಬೆಂಗಳೂರಿನ ನಿವಾಸಿಯೊಬ್ಬರು ಬಿಬಿಎಂಪಿ ಕಾನೂನು ನೋಟಿಸ್ ಜಾರಿ ಮಾಡಿದ್ದು, ಪಾಲಿಕೆ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮತ್ತು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಡಾ. ದಿವ್ಯಾ ಕಿರಣ್ ಬಿಬಿಎಂಪಿಗೆ ನೊಟೀಸ್ ಜಾರಿಗೊಳಿಸಿದ್ದು, ಸಾರ್ವಜನಿಕ ರಸ್ತೆಗಳನ್ನು ನಿರ್ವಹಿಸದ ಕಾರಣ ಉಂಟಾದ ದೈಹಿಕ ನೋವನ್ನು, ಭಾವನಾತ್ಮಕ ಮತ್ತು ಆರ್ಥಿಕ ಹೊರೆಯನ್ನು ಅನುಭವಿಸಿದ್ದಕ್ಕಾಗಿ ₹50 ಲಕ್ಷ ಪರಿಹಾರವನ್ನು ಕೇಳಿದ್ದಾರೆ.
ನೋಟಿಸ್‌ನಲ್ಲಿರುವ ವಿವರಗಳ ಪ್ರಕಾರ, ಕಿರಣ್ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಇದು ಬೆಂಗಳೂರಿನ ರಸ್ತೆಗಳಲ್ಲಿ ಪ್ರಯಾಣಿಸುವಾಗ ಉಂಟಾದ ಸೆಳೆತ ಮತ್ತು ಆಘಾತದಿಂದ ಉಂಟಾಗಿರುವ ಸಮಸ್ಯೆಯಾಗಿದೆ.
ರಿಚ್ಮಂಡ್ ಟೌನ್ ನಿವಾಸಿ ಕಿರಣ್ ಪರವಾಗಿ ವಕೀಲ ಕೆ.ವಿ. ಲವೀನ್ ಕಾನೂನು ನೋಟಿಸ್ ಕಳುಹಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆಗಳ ಕಳಪೆ ಸ್ಥಿತಿಯಿಂದಾಗಿ ಅವರು ಅನುಭವಿಸಿದ ತೀವ್ರ ನೋವು, ಆಘಾತ ಮತ್ತು ಯಾತನೆಯಿಂದಾಗಿ ಈ ಕಾನೂನು ನೋಟಿಸ್ ಕಳುಹಿಸಬೇಕಾಯಿತು ಎಂದು ಹೇಳಿದ್ದಾರೆ. ಆಳವಾದ ಗುಂಡಿಗಳು, ಮುರಿದುಹೋದ ಮತ್ತು ಅಸಮವಾದ ಮಾರ್ಗಗಳು ಮತ್ತು ಚಲಿಸಲು ಯೋಗ್ಯವಲ್ಲದ ರಸ್ತೆಗಳೇ ಕಿರಣ್ ಗೆ ಆರೋಗ್ಯ ಸಮಸ್ಯೆ ಉದ್ಭವಿಸಿದೆ ಎಂದು ನೊಟೀಸ್ ನಲ್ಲಿ ಆರೋಪಿಸಲಾಗಿದೆ.
Advertisement