ಭೂ ಮಾಲೀಕತ್ವ ಇಲ್ಲದವರಿಗೆ ಹಕ್ಕು ಪತ್ರ ವಿತರಣೆ: 6ನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ

‘ಪ್ರಗತಿಯತ್ತ ಕರ್ನಾಟಕ–ಸಮರ್ಪಣೆ ಸಂಕಲ್ಪ’ ಘೋಷವಾಕ್ಯದಡಿ ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರನೇ ಗ್ಯಾರಂಟಿಯ ಜಾರಿಗೊಳಿಸಲಾಯಿತು.
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
Updated on

ಹೊಸಪೇಟೆ: ಎರಡು ವರ್ಷ ಪೂರೈಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಅರ್ಹರಿಗೆ ಭೂಮಿ ಹಕ್ಕು ಪತ್ರ ನೀಡುವ ನೀಡುವ ಮೂಲಕ 6 ಗ್ಯಾರಂಟಿಯನ್ನೂ ಘೋಷಣೆ ಮಾಡಿದೆ.

‘ಪ್ರಗತಿಯತ್ತ ಕರ್ನಾಟಕ–ಸಮರ್ಪಣೆ ಸಂಕಲ್ಪ’ ಘೋಷವಾಕ್ಯದಡಿ ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರನೇ ಗ್ಯಾರಂಟಿಯ ಜಾರಿಗೊಳಿಸಲಾಯಿತು.

ಪುನೀತ್‌ ರಾಜ್‌ಕುಮಾರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಹಟ್ಟಿ, ಹಾಡಿ, ಕೇರಿ, ತಾಂಡಾ, ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಭೂಹಕ್ಕುಪತ್ರ ವಿತರಿಸಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಲಕ್ಷಾಂತರ ಜನರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಆಯ್ದ 40 ಕುಟುಂಬಗಳಿಗೆ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಹಕ್ಕುಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲಾ ಸಮುದಾಯಗಳನ್ನು ತಾರತಮ್ಯವಿಲ್ಲದೆ ಉನ್ನತೀಕರಿಸುತ್ತವೆ ಮತ್ತು ಸಾಮಾಜಿಕ ಮತ್ತು ಆರ್ಥಿಕವಾಗಿ ಅವರನ್ನು ಬಲಪಡಿಸುತ್ತವೆ" ಎಂದು ಹೇಳಿದರು.

ಮುಂದಿನ ಆರು ತಿಂಗಳೊಳಗೆ, ರಾಜ್ಯದ ಉಳಿದ 50,000 ಅರ್ಹ ಕುಟುಂಬಗಳಿಗೆ ಆಸ್ತಿ ಹಕ್ಕು ಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಅಷ್ಟೂ ಭರವಸೆಗಳನ್ನು ಈಡೇರಿಸುತ್ತೇವೆ. ಮೊದಲ ಬಾರಿ ಮುಖ್ಯಮಂತ್ರಿಯಾಗಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿ ಘೋಷಿಸದ ಹೊಸದಾದ 30 ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದ್ದೇವೆ. ಬಿಜೆಪಿ ಏಕೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸದೆ, ಜನರ ಎದುರು ಸುಳ್ಳು ಹೇಳಿಕೊಂಡು ತಿರುಗುತ್ತಿದೆ?

ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
ಸರ್ಕಾರಕ್ಕೆ 2 ವರ್ಷದ ಸಂಭ್ರಮ: ರಾಹುಲ್ ಗಾಂಧಿಗೆ ಪ್ರಗತಿ ವರದಿ ಸಲ್ಲಿಸಲಿರುವ ಸಿಎಂ ಸಿದ್ದರಾಮಯ್ಯ- ಡಿ.ಕೆ ಶಿವಕುಮಾರ್

ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ. ಸಂವಿಧಾನದ ಅಡಿಯಲ್ಲಿ ಸರ್ವ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ನಾವು ಇದೇ ಮೌಲ್ಯವನ್ನು ಪಾಲಿಸುತ್ತಿದ್ದೇವೆಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಪ್ರತೀ ವರ್ಷ ನಮಗೆ ನಷ್ಟ ಆಗುತ್ತಿದೆ. ನಾವು ಪ್ರತೀ ವರ್ಷ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೊಟ್ಟರೆ ನಮಗೆ ವಾಪಾಸ್ ಬರುವುದು ಒಂದು ರೂಪಾಯಿಗೆ 14 ಪೈಸೆ ಮಾತ್ರ. ಇದರಿಂದ ಒಕ್ಕೂಟ ವ್ಯವಸ್ಥೆಯ ಘನತೆ ಹಾಳು ಮಾಡುತ್ತಿದ್ದಾರೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೂ ಕೇಂದ್ರದಿಂದ ಪೂರ್ತಿ ಅನುದಾನ ಬಂದೇ ಇಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ಪೂರ್ತಿ ಕೊಟ್ಟಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ತಮ್ನ ಪಾಲನ್ನು ಕೊಡದೆ ಉಳಿಸಿಕೊಂಡು ಅನ್ಯಾಯ ಮಾಡುತ್ತಿದೆ.

15 ನೇ ಹಣಕಾಸು ಆಯೋಗದ ಕಾಲದಲ್ಲಿ ರಾಜ್ಯಕ್ಕೆ ಕೇಂದ್ರ ಮಾಡಿರುವ ಅನ್ಯಾಯ ನಿಮಗೆಲ್ಲಾ ಗೊತ್ತೇ ಇದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ರೂ.5,300 ಕೋಟಿ ಹಣದಲ್ಲಿ ಬಿಡಿಗಾಸನ್ನೂ ಬಿಡುಗಡೆ ಮಾಡಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಭರವಸೆ ನೀಡಿದರು. ಇದನ್ನೂ ಈಡೇರಿಸಲಿಲ್ಲ.

ಈಗ ಜೆಡಿಎಸ್ ಮತ್ತು ಬಿಜೆಪಿ ಕೂಡಿಕೊಂಡಿವೆ. ಆದರೆ ಬಿಜೆಪಿ ಇದುವರೆಗೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲೇ ಇಲ್ಲ. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದದ್ದು ಬಿಟ್ಟರೆ ರಾಜ್ಯದಲ್ಲಿ ಬಿಜೆಪಿ ಇವತ್ತಿನವರೆಗೂ ಜನರಿಂದ ಬಹುಮತ ಗಳಿಸಿ ಆಯ್ಕೆಯೇ ಆಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಶೇ.40 ಕಮಿಷನ್ ಆರೋಪ ಇತ್ತು. ನಾವು ಇದರ ವಿರುದ್ಧ ಹೋರಾಟ ಮಾಡಿದೆವು, ಅಧಿಕಾರಕ್ಕೆ ಬಂದ ಬಳಿಕ ತನಿಖೆಗೆ ನಾಗಮೋಹನ್ ದಾಸ್ ಸಮಿತಿ ರಚಿಸಿದೆವು. ಸಮಿತಿ ಕೊಟ್ಟಿರುವ ವರದಿಯಲ್ಲಿ ಕಮಿಷನ್ ವ್ಯವಹಾರ ಸಾಬೀತಾಗಿದೆ ಎಂದು ತಿಳಿಸಿದರು.

1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂಪಾಯಿ ಕೊಡುತ್ತಿದ್ದೇವೆ. 1.30 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆಯಡಿ ಅನುಕೂಲ ಒದಗಿಸಿದ್ದೇವೆ. ಜೊತೆಗೆ ಇಡೀ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದ್ದೇವೆ. 2014 ರಲ್ಲಿ ರೂ.28,000 ಇದ್ದ ಚಿನ್ನದ ಬೆಲೆ ಈಗ ಲಕ್ಷ ಆಗಿದೆ. ಗ್ಯಾಸ್ ಬೆಲೆ ರೂ.414 ಇದ್ದದ್ದು ಈಗ ರೂ.850 ಆಗಿದೆ. ಡೀಸೆಲ್, ಪೆಟ್ರೋಲ್, ಎಣ್ಣೆ, ಕಾಳು, ಬೇಳೆ, ರಸಗೊಬ್ಬರ ಎಲ್ಲದರ ಬೆಲೆಯನ್ನೂ ಆಕಾಶಕ್ಕೆ ಏರಿಸಿರುವ ಕೇಂದ್ರದ ಮೋದಿ ಅವರ ಸರ್ಕಾರದ ವಿರುದ್ಧ ಜನಾಕ್ರೋಶ ಇದೆಯೇ ಹೊರತು ನಮ್ಮ ಸರ್ಕಾರದ ವಿರುದ್ಧ ಅಲ್ಲ. ಜನ ನಮ್ಮ ಪರವಾಗಿಯೇ ಇದ್ದಾರೆ.

ಹೀಗಾಗಿ, ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಕಾರ್ಯಕ್ರಮವೇ ನಕಲಿ. ರಾಜ್ಯದ ಜನತೆ ನಮ್ಮ ಮಾಲೀಕರು. ನಮ್ಮ ಮಾಲೀಕರಿಗೆ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ನಿಮ್ಮ ಆಶೀರ್ವಾದ ಇರುವವರೆಗೂ ಬಿಜೆಪಿಯ ಸುಳ್ಳಿನ ರಾಶಿಗೆ ನಾವು ಹೆದರುವ, ಅಂಜುವ ಪ್ರಶ್ನೆಯೇ ಇಲ್ಲ ಎಂದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ಮಂಗಳವಾರ ಸರ್ಕಾರಕ್ಕೆ ತೃಪ್ತಿಯ ದಿನವಾಗಿದೆ. ಎರಡು ವರ್ಷಗಳಲ್ಲಿ, ನಾವು ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದ್ದೇವೆ. ಮುಂಬರುವ ದಿನಗಳಲ್ಲಿಯೂ ಈ ಯೋಜನೆಗಳನ್ನು ಮುಂದುವರಿಸಲಾಗುವುದು. ನಾವು ರಾಜ್ಯದ ಅಭಿವೃದ್ಧಿಯ ಮೇಲೆ ಮಾತ್ರ ಗಮನಹರಿಸುತ್ತೇವೆ ಮತ್ತು ಬಿಜೆಪಿಯ ಟೀಕೆಗಳು ನಮ್ಮ ಸರ್ಕಾರಕ್ಕೆ ಆಶೀರ್ವಾದಗಳಾಗಿವೆ ಎಂದು ಹೇಳಿದರು.

ನಮಗೆ ಅಧಿಕಾರ ನೀಡಿ ರಾಜ್ಯದ ಸೇವೆ ಮಾಡಲು ಆಶೀರ್ವಾದ ಮಾಡಿದ ಜನರ ಋಣ ತೀರಿಸಲು ನಮ್ಮ ಸರ್ಕಾರ ಆರನೆಯದಾಗಿ ಭೂ ಗ್ಯಾರಂಟಿ ಯೋಜನೆ ನೀಡುತ್ತಿದೆ. ಎಐಸಿಸಿ ಅಧ್ಯಕ್ಷರ ನಿರ್ದೇಶನದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ.

ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು.
ವಿದೇಶಗಳಿಗೆ ಸರ್ವಪಕ್ಷ ನಿಯೋಗ: ರಿಜಿಜು ಹೇಳಿಕೆ 'ಸುಳ್ಳು', ಬಿಜೆಪಿಯಿಂದ ಕೀಳು ಮಟ್ಟದ ರಾಜಕೀಯ- ಕಾಂಗ್ರೆಸ್

ನಾವಿಂದು ಎರಡು ವರ್ಷಗಳ ಸಂಭ್ರಮಾಚರಣೆ ಮಾಡಲು ಇಲ್ಲಿಗೆ ಬಂದಿಲ್ಲ. ಕರ್ನಾಟಕ ರಾಜ್ಯದ ಜನರ ಋಣ ತೀರಿಸಲು ಸಮರ್ಪಣೆಯ ಸಂಕಲ್ಪ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 136 ಕ್ಷೇತ್ರಗಳಲ್ಲಿ ಶಾಸಕರನ್ನು ಆಯ್ಕೆ ಮಾಡಿ ನಮಗೆ ಆಶೀರ್ವಾದ ಮಾಡಿದಿರಿ. ನಿಮ್ಮ ಋಣ ತೀರಿಸಲು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡುವ ಮೂಲಕ ನಮ್ಮ ಸರ್ಕಾರ ಇತಿಹಾಸ ಬರೆಯುತ್ತಿದೆ.

ಗ್ರಾಮೀಣ ಪ್ರದೇಶದ ಬಡ ಜನರು, ಕಳೆದ ಐವತ್ತು ವರ್ಷಗಳಿಂದ ಪಟ್ಟಾ ಖಾತೆ ಇಲ್ಲದವರಿಗೆ ಇಂದು ಈ ಯೋಜನೆ ಮೂಲಕ ದಾಖಲಾತಿ ನೀಡುತ್ತಿದ್ದೇವೆ. ಇಂತಹ ಐತಿಹಾಸಿಕ ಯೋಜನೆ ನೀಡಿರುವ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಅವರ ಅಧಿಕಾರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಗರ ಪ್ರದೇಶಗಳಲ್ಲಿ ನಾನು, ಭೈರತಿ ಸುರೇಶ್, ರಹೀಂ ಖಾನ್ ಅವರು ಸೇರಿ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ಖಾತೆಗಳನ್ನು ಸರಿಪಡಿಸಿ ಜನರಿಗೆ ನೀಡುವ ಏಳನೇ ಗ್ಯಾರಂಟಿಯನ್ನು ಘೋಷಣೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ ಎಂದು ಹೇಳಿದರು.

ನಮ್ಮ ಸರ್ಕಾರದ 2 ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಬೇಡಿ ಹಾಕಿದೆ. ಇಂದಿರಾ ಗಾಂಧಿ ಅವರು ಈ ಜಿಲ್ಲೆಯಲ್ಲಿ ವಿಜಯನಗರ ಸ್ಟೀಲ್ ಆರಂಭಿಸಿದರು. ಸೋನಿಯಾ ಗಾಂಧಿ ಅವರು ಇಲ್ಲಿ ಬಂದು ವಿದ್ಯುತ್ ಶಕ್ತಿಯ ಆರ್ ಟಿಪಿಎಸ್ ಆರಂಭಿಸಿದರು. ರಾಹುಲ್ ಗಾಂಧಿ ಅವರು ನಮ್ಮ ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಮಾಡಿದ ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಗೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 6 ಸಂಸದರನ್ನು ಆಯ್ಕೆ ಮಾಡಿದ್ದೀರಿ. ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವರ್ಷಕ್ಕೆ 5 ಸಾವಿರ ಕೋಟಿ ನೀಡುತ್ತಿದ್ದೇವೆ ದರು.

ವಿರೋಧ ಪಕ್ಷಗಳು ನಮ್ಮ ವಿರುದ್ಧ ಟೀಕೆಗಳನ್ನು ಮಾಡುತ್ತಿವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದಕ್ಕೆ ನಮ್ಮ ಯೋಜನೆಗಳೇ ಸಾಕ್ಷಿ. ರೈತರ ಬವಣೆ ನೀಗಿಸಲು ರಾಜ್ಯದ ಕೆರೆಗಳನ್ನು ತುಂಬಿಸಲು ಕಾರ್ಯಕ್ರಮ ರೂಪಿಸಲಾಗಿದೆ. ನವಲಿ ಅಣೆಕಟ್ಟು ಯೋಜನೆ ಮಾಡಲು ಚರ್ಚೆ ಮಾಡುತ್ತಿರುವ ಹೊತ್ತಿನಲ್ಲಿಯೇ. ನಮ್ಮ ಪಾಲಿನ 24 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಕೆರೆಗಳಿಗೆ ತುಂಬಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಈ ವಿಚಾರವಾಗಿ ಆಂಧ್ರ ಪ್ರದೇಶ ರಾಜ್ಯದ ಜತೆ ಚರ್ಚೆ ಮಾಡಬೇಕಿದೆ. ಈ ಯೋಜನೆ ಮೂಲಕ ನಿಮ್ಮ ರಕ್ಷಣೆ ಮಾಡಲು ನಾವು ಬದ್ಧ ದು ಭರವಸೆ ನೀಡಿದರು.

ನಮ್ಮ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದಾಗಿದ್ದಾರೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಕಲ್ಯಾಣ ಪಥ ಯೋಜನೆ ರೂಪಿಸಲಾಗಿದೆ. ಇದರ ಜತೆಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ನಮ್ಮ ಸಚಿವರು ಹೊಸ ಯೋಜನೆ ತಂದು ಜನರ ಸೇವೆ ಮಾಡುತ್ತಿದ್ದಾರೆ ಎಂದರು.

ನಮ್ಮ ಸರ್ಕಾರ ಬಸವಣ್ಣನವರ ಮಾರ್ಗದರ್ಶನದಂತೆ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಮ್ಮ ಸರ್ಕಾರದ ಕಾರ್ಯ ಸಾಧನೆಯನ್ನು ವಿರೋಧ ಪಕ್ಷಗಳು ಕಣ್ಣಲ್ಲಿ ನೋಡಲಾಗದೇ, ಟೀಕೆ ಮಾಡುತ್ತಿದ್ದಾರೆ. ಅವರು ಟೀಕೆ ಮಾಡುತ್ತಿರಲಿ, ನಾವು ಜನರ ಬದುಕು ಉಳಿಸುವ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com