
ಮಡಿಕೇರಿ: ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಎಸ್ಟೇಟ್ ಕಾರ್ಮಿಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮಡಿಕೇರಿಯ ದಕ್ಷಿಣ ಕೊಡಗಿನ ದೇವರಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎಸ್ಟೇಟ್ ಕಾರ್ಮಿಕ ಅಣ್ಣಯ್ಯ (41) ಎಂಬಾತ ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಗ್ರಾಮದಲ್ಲಿ'ಬೇಡು ನಮ್ಮೆ' ಎಂಬ ವಿಶಿಷ್ಟ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಎನ್ನಲಾಗಿದೆ. ಗ್ರಾಮಸ್ಥರು ಅಯ್ಯಪ್ಪ ದೇವಸ್ಥಾನದ ಬಳಿ ಉತ್ಸವವನ್ನು ಪ್ರಾರಂಭಿಸಲು ಸೇರಿದ್ದರು. ಈ ವೇಳೆ ದೇವಾಲಯದ ಆವರಣದ ಬಳಿ ಈ ದಾಳಿ ನಡೆದಿದೆ.
ಎಂದಿನಂತೆ ಎಸ್ಟೇಟ್ ಕಾರ್ಮಿಕ ಅಣ್ಣಯ್ಯ ಖಾಸಗಿ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ಮನೆಯಿಂದ ಹೊರಟಿದ್ದರು. ದಾರಿಯಲ್ಲಿ, ಕಾಡಾನೆ ಜೊತೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅಣ್ಣಯ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಆನೆ ಅಣ್ಣಯ್ಯ ಅವರನ್ನು ಅಟ್ಟಾಡಿಸಿದೆ. ಕಾಡಿನ ಅಂಚಿನ ಕಿರಿದಾದ ಹಾದಿಯಲ್ಲಿ ದಾರಿ ಕಾಣದೆ ಅಣ್ಣಯ್ಯ ಆನೆ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಆನೆ ಅವರನ್ನು ತುಳಿದು ಕೊಂದು ಹಾಕಿದೆ.
ಈ ವೇಳೆ ಅಣ್ಣಯ್ಯ ಅವರ ಆಕ್ರಂದನ ಕೇಳಿ ಅಯ್ಯಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ಗ್ರಾಮಸ್ಥರು ಓಡಿ ಬಂದಿದ್ದು, ಆನೆ ದಾಳಿ ವಿಚಾರ ಬಯಲಾಗಿದೆ. ಕೂಡಲೇ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದ ಕೂಡಲೇ ತಿಥಿಮತಿ ವಿಭಾಗದ ಆರ್‌ಎಫ್‌ಒ ಗಂಗಾಧರ್ ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಣ್ಯಾಧಿಕಾರಿಗಳು ಮೃತ ದೇಹವನ್ನು ಸ್ಥಳಾಂತರಿಸಲು ಪ್ರಯತ್ನಿಸಿದಾಗ, ಸ್ಥಳದಲ್ಲಿದ್ದ ಕಾಡಾನೆ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಈ ವೇಳೆ ಅರಣ್ಯ ಸಿಬ್ಬಂದಿ ಆನೆಯನ್ನು ಕಾಡಿಗೆ ಅಟ್ಟುವಲ್ಲಿ ಸಫಲರಾದರು.
ಅದಾಗ್ಯೂ, ಹೆಚ್ಚಿನ ಅರಣ್ಯಾಧಿಕಾರಿಗಳನ್ನು ನಿಯೋಜಿಸಲಾಯಿತು. ಕಾಡಾನೆ ಕಾಡಿನ ಅಂಚುಗಳಿಗೆ ಹಿಂತಿರುಗದಂತೆ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಅಂದಹಾಗೆ ‘ಬೇಡು ನಮ್ಮೆ' ಆಚರಣೆ ಗ್ರಾಮಸ್ಥರ ವಿಶಿಷ್ಠ ಆಚರಣೆಯಾಗಿದ್ದು, ಈ ಆಚರಣೆಯ ನಂತರ ಇಡೀ ಗ್ರಾಮವು ಹಬ್ಬದ ವಾತಾವರಣದಲ್ಲಿರುತ್ತದೆ. ಬಹುಪಾಲು ಬುಡಕಟ್ಟು ಜನಾಂಗದವರು ಸೇರಿದಂತೆ ಸಾವಿರಾರು ಗ್ರಾಮಸ್ಥರು ಪವಿತ್ರ ತೋಪಿನಲ್ಲಿ ಇರುವ ದೇವಾಲಯದ ಆವರಣದಲ್ಲಿ ನಡೆಯುವ ಉತ್ಸವದಲ್ಲಿ ಭಾಗವಹಿಸುತ್ತಾರೆ.
ಆದರೆ ಈ ಬಾರಿ ಆಚರಣೆ ಕಳೆಗುಂದಿತ್ತು. ಎಸ್ಟೇಟ್ ಕಾರ್ಮಿಕ ಅಣ್ಣಯ ಸಾವು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿತ್ತು. ಹಬ್ಬದ ಸಮಯದಲ್ಲಿ ಆನೆಗಳನ್ನು ದೂರವಿಡಲು ಅರಣ್ಯ ಇಲಾಖೆಯಿಂದ ಹೆಚ್ಚುವರಿ ಪಡೆ ಗ್ರಾಮದಾದ್ಯಂತ ಕಾವಲು ಕಾಯಲಿದೆ.
Advertisement