
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಂಬ ಹೆಸರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (KDA) ಆಕ್ಷೇಪ ವ್ಯಕ್ತಪಡಿಸಿದ್ದು, ಕನ್ನಡದ ಹೆಸರಿಡುವಂತೆ ಆಗ್ರಹಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಡಿಎ ಅಧ್ಯಕ್ಷ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, . ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಂದು ಬದಲಾಯಿಸುವುದಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಉತ್ತಮ ಆಡಳಿತಕ್ಕಾಗಿ ಅಸ್ತಿತ್ವದಲ್ಲಿರುವ ಬಿಬಿಎಂಪಿಯನ್ನು ಸಣ್ಣ ನಿಗಮಗಳಾಗಿ ವಿಭಜಿಸುವ ನಿರ್ಧಾರವನ್ನು ಕೆಡಿಎ ಸ್ವಾಗತಿಸುತ್ತದೆ. ಆದರೆ, 'ಗ್ರೇಟರ್' ಪದ ಬಳಕೆ ಮಾಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿದರು.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಎನ್ನುವ ಹೆಸರು ಹೆಚ್ಚಾಗಿ ಆಂಗ್ಲ ಭಾಷೆಯನ್ನು ಪ್ರತಿಬಿಂಬಿಸುತ್ತಿದ್ದು, ಇದಕ್ಕೆ ಇನ್ನಷ್ಟು ಕನ್ನಡತನದ ಅವಶ್ಯವಿದೆ. ಈ ಅಂಶವನ್ನು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದರು.
ಈ ಪ್ರಾಧಿಕಾರಕ್ಕೆ ಕನ್ನಡ ಪದ ಬಳಸುವ ನಿಟ್ಟಿನಲ್ಲಿ ಸರ್ಕಾರವು ಗಂಭೀರವಾಗಿ ಆಲೋಚಿಸಬೇಕಿದ್ದು, ಸಾರ್ವಜನಿಕರಿಂದ ಸೂಕ್ತ ಹೆಸರನ್ನು ಸೂಚಿಸಲು ಸಲಹೆಗಳನ್ನು ಆಹ್ವಾನಿಸಬೇಕು. ಸಾರ್ವಜನಿಕರು ಸೂಚಿಸಿದ ಹೆಸರಲ್ಲಿ ಅತ್ಯುತ್ತಮವಾದ ಹೆಸರನ್ನು ಉದ್ದೇಶಿತ ಪ್ರಾಧಿಕಾರಕ್ಕೆ ಇಡುವ ಮೂಲಕ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿ ಉಳಿಸುವಲ್ಲಿ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಏತನ್ಮಧ್ಯೆ, ಕೆಡಿಎ ಕನ್ನಡ ಕಲಿಕಾ ಕಾರ್ಯಕ್ರಮವನ್ನುರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಈವರೆಗೆ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಸಂಬಂಧ ಪೂರ್ವಭಾವಿ ಕ್ರಮಗಳಿಗೆ ಚಾಲನೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೇಂದ್ರೋದ್ಯಮಗಳು, ಬ್ಯಾಂಕ್‌ಗಳು, ಕೇಂದ್ರ ಸರ್ಕಾರಿ ಕಚೇರಿಗಳು ರಾಜ್ಯದಾದ್ಯಂತ ಇದ್ದು, ಈ ಸಂಸ್ಥೆಗಳಲ್ಲಿ ಹಲವಾರು ಅನ್ಯಭಾಷಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಾರ-ವ್ಯವಹಾರಗಳಿಗಾಗಿಯೂ ಬೇರೆ ರಾಜ್ಯಗಳಿಂದ ಬಂದು, ಕರ್ನಾಟಕದಲ್ಲಿ ನೆಲೆ ಕಂಡುಕೊಂಡಿರುವ ಹಲವು ಅನ್ಯಭಾಷಿಕರು ಇದ್ದಾರೆ. ಈ ಸಮುದಾಯವನ್ನು ಪ್ರತಿ ಜಿಲ್ಲೆಯಲ್ಲಿ ಗುರುತಿಸಿ, ಅವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಲು ಪ್ರಾಧಿಕಾರ ನಿರ್ಣಯಿಸಿದೆ.
ಈ ಬೃಹತ್ ಅಭಿಯಾನಕ್ಕೆ ರಾಜ್ಯದಾದ್ಯಂತ ಇರುವ ಆಸಕ್ತ ಸಂಘ ಸಂಸ್ಥೆಗಳು ಸಂಬಂಧಪಟ್ಟ ಜಿಲ್ಲಾಡಳಿತದಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲಾಡಳಿತವು ತರಗತಿ ನಡೆಸಲು ಸ್ಥಳಾವಕಾಶ ಒದಗಿಸಲಿದೆ. ಜಿಲ್ಲಾಡಳಿತದಿಂದ ನೇಮಿಸಲ್ಪಡುವ ಶಿಕ್ಷಕರಿಗೆ ಗೌರವ ಸಂಭಾವನೆಯನ್ನು ಪ್ರಾಧಿಕಾರವೇ ನೀಡಲಿದೆ. ಬೋಧನೆಗೆ ಸಂಬಂಧಿಸಿದಂತೆ ವಿಶೇಷ ಪಠ್ಯಕ್ರಮವನ್ನು ರೂಪಿಸಲಾಗಿದೆ’ ಎಂದು ಇದೇ ವೇಳೆ ಬಿಳಿಮಲೆ ಅವರು ಮಾಹಿತಿ ನೀಡಿದರು.
Advertisement