
ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಬುಧವಾರ ನಡೆಸಿದ್ದ ದಾಳಿ, ಗುರುವಾರ ಕೂಡ ಮುಂದುವರೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು, ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಿದ್ಧಾರ್ಥ ಕಾಲೇಜಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಭಾವಿ ವ್ಯಕ್ತಿಯೊಬ್ಬರ ಸೂಚನೆ ಮೇರೆಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಟ್ರಸ್ಟ್ ಮೂಲಕ ರನ್ಯಾ ರಾವ್ ಕ್ರೆಡಿಟ್ ಕಾರ್ಡ್‌ಗೆ 40 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪವಿದ್ದು, ಇದರ ಆಧಾರದಲ್ಲಿ ಒಟ್ಟು 16 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಡಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದುಬೈನಿಂದ ಬಂದ ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಬಂಧಿಸಿ 14.2 ಕೆಜಿ ತೂಕದ ಮತ್ತು 12.56 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಮಂಗಳವಾರ ರನ್ಯಾ ರಾವ್ ಮತ್ತು ಸಹ-ಆರೋಪಿ ತರುಣ್ ಕೊಂಡರು ರಾಜು ಅವರಿಗೆ ಜಾಮೀನು ನೀಡಿದೆ. ನಿಗದಿತ ಅವಧಿಯೊಳಗೆ ಡಿಆರ್‌ಐ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ. ಆದರೆ, ಜಾಮೀನು ಬಳಿಕವೂ ರನ್ಯಾ ಅವರು ಜೈಲಿನಲ್ಲೇ ಉಳಿಯಬೇಕಾಗಿ ಬಂದಿದೆ. ರನ್ಯಾ ರಾವ್ ವಿರುದ್ಧ ಕೇಂದ್ರೀಯ ಗುಪ್ತಚರ ಬ್ಯೂರೋ (ಸಿಇಐಬಿ) ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಪೋಸಾ) ಅಡಿಯಲ್ಲಿ ಬಂಧನ ಆದೇಶ ಹೊರಡಿಸಿರುವುದರಿಂದ ಬಿಡುಗಡೆ ಭಾಗ್ಯ ಲಭ್ಯವಾಗಿಲ್ಲ.
ಈ ನಡುವೆ ಇಡಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್ ಅವರು, ಬುಧವಾರ ನಮ್ಮ ಶಿಕ್ಷಣ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಯಾವ ಸೂಚನೆ ಮೇಲೆ ಭೇಟಿ ಅಂತ ಗೊತ್ತಿಲ್ಲ. ನಮ್ಮ ಅಕೌಂಟ್ಸ್ ಕೇಳಿದ್ದಾರೆ. ನಾನು ಅಕೌಂಟ್ ಕೊಡಲು ಹೇಳಿದ್ದೇನೆ. ಯಾವ ವರ್ಷಗಳ ಲೆಕ್ಕ ಕೇಳಿದ್ದಾರೆ, ಅದನ್ನು ಕೊಡಿ ಅಂದಿದ್ದೇನೆ ಎಂದು ಹೇಳಿದರು.
ಇ.ಡಿ ಅಧಿಕಾರಿಗಳಿಂದ ಇಂದೂ ಕೂಡ ವಿಚಾರಣೆ ಮುಂದುವರೆದಿದೆ. ಅವರ ಉದ್ದೇಶ ನಮಗೆ ಗೊತ್ತಿಲ್ಲ. ಅವರಿಗೆ ಸಹಕಾರ ಕೊಟ್ಟಿದ್ದೇವೆ. ಯಾವುದನ್ನೂ ಮುಚ್ಚಿಟ್ಟಿಲ್ಲ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು. ಎಲ್ಲರಿಗೂ ಒಂದೆ ಕಾನೂನು ಇದೆ. ನಾನು ಕಾನೂನಿಗೆ ಗೌರವ ಕೋಡುತ್ತೇನೆ ಎಂದು ತಿಳಿಸಿದರು.
ಇ.ಡಿ ಅಧಿಕಾರಿಗಳಿಗೆ ನಮ್ಮ ಸಂಸ್ಥೆ ಕೂಡ ಗೌರವ, ಸಹಕಾರ ನೀಡುತ್ತೇವೆ. ನಮಗೆ ಕೇಳುವ ಪ್ರಶ್ನೆಗೆ ಸಹಕಾರ ನೀಡುತ್ತೇವೆ. ವಿಚಾರಣೆ ನಡೆಯುತ್ತಿದೆ, ಯಾವುದೇ ಊಹಾಪೋಹಗಳು ಬೇಡ. ಇಡಿ ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವು ಕೂಡ ಸಹಕಾರ ನೀಡುತ್ತೇವೆ ಎಂದರು.
Advertisement