
ಬೆಂಗಳೂರು: ಆರ್.ವಿ. ದೇಶಪಾಂಡೆ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ 8ನೇ ವರದಿಯನ್ನು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ವರದಿಯಲ್ಲಿ ಹಲವು ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ನೀಡಲಾಗಿದೆ.
ಆಯೋಗವು ಕಾಲ್ತುಳಿತ, ಅಗ್ನಿ ಅವಘಡ ನಿರ್ವಹಣೆಗೆ ದೇವಾಲಯ ಕಾರ್ಯಪಡೆ ( ಟೆಂಪಲ್ ಟಾಸ್ಕ್ ಫೋರ್ಸ್) ಸ್ಥಾಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಟಿಟಿಎಫ್ ಮೂಲಕ ದೇವಾಲಯಗಳಲ್ಲಿ ಸೇರುವ ಜನಸಂದಣಿಯನ್ನು ಉತ್ತಮವಾಗಿ ನಿರ್ವಹಿಸಬಹುದು ಮತ್ತು ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಾಗ ಕಾಲ್ತುಳಿತವನ್ನು ತಡೆಯಬಹುದು. ಇದು ದೇವಾಲಯ ಸೇವೆಗಳ ಪರಿಣಾಮಕಾರಿ ನಿರ್ವಹಣೆಯನ್ನು ಉತ್ತೇಜಿಸುತ್ತದೆ ಮತ್ತು ಟಿಕೆಟ್ ಕೌಂಟರ್‌ಗಳು, 'ದರ್ಶನ' ಸಾಲುಗಳು ಮತ್ತು 'ಪ್ರಸಾದ' ವಿತರಣೆಗೆ ಕ್ರಮಬದ್ಧವಾದ ಸರತಿ ಸಾಲುಗಳನ್ನು ನಿರ್ವಹಿಸುವುದನ್ನು ಖಚಿತಪಡಿಸುತ್ತದೆ.
ದೊಡ್ಡ ಕಾರ್ಯಕ್ರಮಗಳ ಸಮಯದಲ್ಲಿ, ದೇವಾಲಯದ ಒಳಗೆ ಮತ್ತು ಸುತ್ತಮುತ್ತ ತಾತ್ಕಾಲಿಕ ವೈದ್ಯಕೀಯ ಬೂತ್‌ಗಳನ್ನು ಸ್ಥಾಪಿಸುವುದು ಮತ್ತು ಭದ್ರತಾ ಉಪಸ್ಥಿತಿಯನ್ನು ಹೆಚ್ಚಿಸುವುದು ಅಗತ್ಯವಾಗಬಹುದು. ಈ ವೇಳೆ ಪ್ರವೇಶ ದ್ವಾರದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು, ಬ್ಯಾರಿಕೇಡ್‌ಗಳನ್ನು ಸ್ಥಾಪಿಸುವುದು ಮತ್ತು ಅಡಚಣೆಗಳು ಮತ್ತು ದಟ್ಟಣೆಯನ್ನು ತಪ್ಪಿಸಲು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕಾರ್ಯಗತಗೊಳಿಸುತ್ತದೆ. ಸಮಗ್ರ ತುರ್ತು ಪ್ರತಿಕ್ರಿಯೆ ಯೋಜನೆಯನ್ನು ರಚಿಸಲು ಇದು ಸ್ಥಳೀಯ ಅಧಿಕಾರಿಗಳು, ವೈದ್ಯಕೀಯ ಸೇವೆಗಳು ಮತ್ತು ಅಗ್ನಿಶಾಮಕ ಸುರಕ್ಷತಾ ಸಿಬ್ಬಂದಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ,
ಕಾರ್ಯಪಡೆಯು ಕ್ಯೂ ವ್ಯವಸ್ಥೆಗಳು, ಪ್ರವೇಶ ಮತ್ತು ನಿರ್ಗಮನ ಪ್ರದೇಶ, ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ದೇವಾಲಯದ ಸಮಯ ಅಥವಾ ಕಾರ್ಯವಿಧಾನಗಳಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಭಕ್ತರಿಗೆ ತಿಳಿಸಲು ಸ್ಪಷ್ಟವಾದ ಫಲಕಗಳು, ಧ್ವನಿವರ್ಧಕಗಳು ಮತ್ತು ಇತರ ಸಂವಹನ ಸಾಧನಗಳನ್ನು ಬಳಸುತ್ತದೆ.
ಅದಕ್ಕೆ ಅನುಗುಣವಾಗಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ನಿಯಮಗಳು, 2002 ರ ಸೂಕ್ತ ನಿಬಂಧನೆಗಳನ್ನು ತಿದ್ದುಪಡಿ ಮಾಡಬಹುದು ಎಂದು ವರದಿಯಲ್ಲಿ ಹೇಳಿದೆ.
ಇದಲ್ಲದೆ, ಆಯೋಗವು ಡಳಿತದಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ 23 ಇಲಾಖೆಗಳಲ್ಲಿ ನಿರ್ಣಾಯಕವೆನಿಸಿದ 15,000 ಖಾಲಿ ಹುದ್ದೆಗಳನ್ನು ಪ್ರಥಮ ಆದ್ಯತೆ ಮೇರೆಗೆ ಭರ್ತಿ ಮಾಡಬೇಕೆಂದು ಶಿಫಾರಸು ಮಾಡಿದೆ.
ಇತರೆ ಪ್ರಮುಖ ಶಿಫಾರಸುಗಳು ಇಂತಿವೆ...
ನಗರಾಭಿವೃದ್ಧಿ ಪ್ರಾಧಿಕಾರಗಳು ನಿಗದಿತ ಎರಡು ವರ್ಷಗಳ ಅವಧಿ ಪೂರ್ಣಗೊಂಡ ನಂತರವೂ ಅಂತಿಮ ಆವೃತ್ತಿಯ ಮಾಸ್ಟರ್ ಪ್ಲಾನ್ ಸಲ್ಲಿಸುವುದಿಲ್ಲ. ವಿಳಂಬವು ಎರಡು ವರ್ಷಗಳ ಕಾಲಮಿತಿ ಮೀರಿದರೆ ಸಂಬಂಧಪಟ್ಟ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ದಂಡ ವಿಧಿಸಬೇಕು.
ಮುದ್ರಣ ಸೇವೆಗಳಿಗೆ ಸ್ಪರ್ಧಾತ್ಮಕ ಬೆಲೆ, ಸುಸ್ಥಿರತೆ ಕಾಪಾಡಿಕೊಳ್ಳಲು, ಉತ್ಪಾದಕತೆ ಮತ್ತು ಮುದ್ರಣ ಗುಣಮಟ್ಟ ಹೆಚ್ಚಿಸಲು ಡಿಜಿಟಲ್ ಮುದ್ರಣ, ಸುಧಾರಿತ ತಂತ್ರಜ್ಞಾನ ಬಳಸಬೇಕು.
ವಿಧಾನಸೌಧ, ವಿಕಾಸಸೌಧ ಅಥವಾ ಬಹುಮಹಡಿ ಕಟ್ಟಡದ ಬಳಿ ಸರಕಾರಿ ಕೇಂದ್ರ ಲೇಖನ ಸಾಮಗ್ರಿ ಮಳಿಗೆ ಸ್ಥಾಪಿಸಬೇಕು.
ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಇಎ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳು ಬೆಂಗಳೂರನ್ನು ಹೊರತುಪಡಿಸಿದರೆ ಧಾರವಾಡದಲ್ಲೇ ಹೆಚ್ಚಾಗಿ ನಡೆಯುತ್ತದೆ. ಸಿಬ್ಬಂದಿ ಮತ್ತು ಸಂಪನ್ಮೂಲ ಕೊರತೆಯಿದ್ದು, ಪದೇಪದೇ ಪರೀಕ್ಷೆಗಳನ್ನು ಆಯೋಜಿಸುವುದರಿಂದ ಜಿಲ್ಲಾಡಳಿತಕ್ಕೆ ನಿರ್ವಹಣೆ ಕಷ್ಟವಾಗುತ್ತಿರುವುದರಿಂದ ಧಾರವಾಡದಲ್ಲಿ ಕೆಪಿಎಸ್‌ಸಿ ಶಾಖಾ ಕಚೇರಿ ತೆರೆಯಬೇಕು
ಪಡಿತರ ಚೀಟಿ ಡೇಟಾಬೇಸ್ ಅನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ (ಇ-ಜನ್ಮ) ಸಂಯೋಜಿಸಬೇಕು. ಇದರಿಂದ ಮೃತ ಸದಸ್ಯ ಹೆಸರು ರದ್ದತಿಗೆ ಅನುಕೂಲ.
ಅರ್ಹ ಕಾರ್ಡ್‌ದಾರರ ಪಟ್ಟಿಯಿಂದ ಅನರ್ಹವೆಂದು ಕಂಡುಬಂದ ಕಾರ್ಡ್‌ಗಳನ್ನು ನೇರವಾಗಿ ಅಮಾನತುಪಡಿಸುವ/ ರದ್ದುಪಡಿಸುವ ಪ್ರಕ್ರಿಯೆ ನಡೆದಿದ್ದು, ಫಲಾನುಭವಿಗಳು ಗೊಂದಲದಲ್ಲಿದ್ದಾರೆ. ಎಎವೈ ಹಾಗೂ ಪಿಎಚ್‌ಎಚ್ ಪಡಿತರ ಚೀಟಿಗಳನ್ನು ಸೇರಿಸಲು, ಹೊರಗಿಡಲು ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡ ಪ್ರಕ್ರಿಯೆಯನ್ನು ಔಪಚಾರಿಕಗೊಳಿಸಲು ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಿಗಾಗಿ ಸಿದ್ಧಪಡಿಸಿದ ಮಾನದಂಡಗಳನ್ನು (ಎಸ್‌ಒಪಿ) ಅನುಸರಿಸಿ ಈ ಪ್ರಕ್ರಿಯೆಯಲ್ಲಿ ಅನರ್ಹಗೊಳಿಸುವ ಮೊದಲು ಮೇಲ್ಮನವಿ ಅವಕಾಶ ಒದಗಿಸಬೇಕು
ಬಿಪಿಎಲ್ ಕಾರ್ಡ್ ಅನರ್ಹರ ಕೈಸೇರದಂತೆ ಮಾಡಲು ಜಿಎಸ್‌ಟಿ, ಇಪಿಎಫ್, ಆದಾಯ ತೆರಿಗೆ ಡೇಟಾಬೇಸ್‌ಗಳನ್ನು ಕುಟುಂಬದ ದತ್ತಾಂಶದೊಂದಿಗೆ ಪರಿಶೀಲಿಸಬೇಕು.
ಆಹಾರ ಇಲಾಖೆಯು ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಸಮಗ್ರಗೊಂಡ ಕುಟುಂಬ ದತ್ತಾಂಶ ಬಳಸಿಕೊಂಡು ಎಎವೈ ಅಥವಾ ಪಿಎಚ್‌ಎಚ್ ಅಡಿ ವಿಕಲಚೇತನರು, ಜೀತದಾಳುಗಳು ಸೇರಿದಂತೆ ಆಯ್ದ ವರ್ಗದ ಕುಟುಂಬಗಳನ್ನು ಪರಿಶೀಲಿಸಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು
ಸಾಮಾಜಿಕ, ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) 2011ರ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿಗದಿಪಡಿಸಿ ಮಾನದಂಡಗಳು, ವಿಧಾನವನ್ನು ರಾಜ್ಯ ಸರಕಾರ ಅಗತ್ಯವಿರುವಲ್ಲಿ ಸೂಕ್ತ ಮಾರ್ಪಾಡುಗಳೊಂದಿಗೆ ಬಿಪಿಎಲ್ ಕುಟುಂಬವನ್ನು ಗುರುತಿಸಬಹುದು.
ಉನ್ನತ ತರಗತಿಗಳಿಗೆ ಪ್ರವೇಶ ಅಥವಾ ಬಡ್ತಿಗಾಗಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಆದಾಯ ಅಥವಾ ಜಾತಿ ಪ್ರಮಾಣ ಪತ್ರಗಳ ಹಾರ್ಡ್ ಕಾಪಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸೂಚಿಸಿ ಎಲ್ಲ ಇಲಾಖೆಗಳು, ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಬೇಕು
ಜಾತಿ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಇತರೆ ಮಾಹಿತಿಯನ್ನು ಸಂಬಂಧಪಟ್ಟ ಡೇಟಾಬೇಸ್‌ಗಳಿಂದ ನೇರವಾಗಿ ಪಡೆಯುವಂತೆ ಆದಾಯ ಪ್ರಮಾಣಪತ್ರ ಡೇಟಾಬೇಸ್‌ಗೆ ಲಿಂಕ್ ನೀಡಬೇಕು
ಇಡೀ ಕುಟುಂಬಕ್ಕೆ ಏಕೀಕೃತ ಆದಾಯ ಪ್ರಮಾಣ ಪತ್ರ ನೀಡಬೇಕು.
ಕುಟುಂಬಕ್ಕೆ ನೀಡಲಾಗುವ ಆದಾಯ ಪ್ರಮಾಣ ಪತ್ರವು ಕುಟುಂಬ ಡೇಟಾಬೇಸ್‌ನ ಒಂದು ಭಾಗವಾಗಿರಬೇಕು. ಸರಕಾರದಿಂದ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಕುಟುಂಬ ಐಡಿ ಒದಗಿಸಬೇಕು
ಬಹು ಆದಾಯ ಪ್ರಮಾಣ ಪತ್ರಗಳ ವಿತರಣೆ ನಿಲ್ಲಿಸಬೇಕು.
Advertisement