
ಬೆಂಗಳೂರು: ಮುಂಗಾರು ಪೂರ್ವ ಮಳೆಯ ಹಿನ್ನೆಲೆಯಲ್ಲಿ ಮಹಾದೇವಪುರ ವಲಯದ ಸುಮಾರು 45 ಎಕರೆ ವಿಸ್ತೀರ್ಣದ ವಿಭೂತಿಪುರ ಕೆರೆಯಲ್ಲಿ' ಆಫ್ರಿಕನ್ ಕ್ಯಾಟ್‌ಫಿಶ್ 'ಕಂಡುಬಂದಿವೆ. ಇದರಿಂದ ಕೆರೆಯ ಪುನಶ್ಚೇತನಕ್ಕೆ ಭಾರಿ ಹಿನ್ನಡೆಯಾಗಿದೆ.
ಈಗಾಗಲೇ ಕೆರೆ ಮತ್ತು ಬಫರ್ ಝೋನ್ ಒತ್ತುವರಿ ಮಾಡಲಾಗಿದೆ ಎಂದು ಹೇಳುತ್ತಿದ್ದ ವಾಯುವಿಹಾರಿ ಮತ್ತು ಕೆರೆ ಸಂರಕ್ಷಣೆ ಕಾರ್ಯಕರ್ತರು, ಈಗ ಮಳೆಯಿಂದಾಗಿ ಕೆರೆಗೆ ಕೊಳಕು ನೀರು ನುಗ್ಗಿದ್ದು, ನಿಷೇಧಿತ ಆಫ್ರಿಕನ್ ಕ್ಯಾಟ್‌ಫಿಶ್‌ಗಳು ಕೆರೆಯಲ್ಲಿ ಬೀಡುಬಿಟ್ಟಿರುವುದಾಗಿ ತಿಳಿಸಿದ್ದಾರೆ.
ವಾಯು ವಿಹಾರಿ ರವಿಕುಮಾರ್ ಮಾತನಾಡಿ, ‘ಹತ್ತು ದಿನಗಳ ಹಿಂದೆ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಾಗ ಈ ಮೀನುಗಳು ಸಣ್ಣ ಜಾಗಗಳಲ್ಲಿ ಕಂಡುಬರುತ್ತಿದ್ದವು. ಆದರೆ ಮಳೆಯ ನಂತರ ಕೆರೆ ತುಂಬೆಲ್ಲಾ ಕಾಣಸಿಗುತ್ತಿವೆ ಎಂದರು.
ಕಳೆದ ವರ್ಷ ಕೆರೆಯ ಕಳಪೆ ನಿರ್ವಹಣೆ ಹಾಗೂ ಅತಿಕ್ರಮಣ ಕುರಿತು ಲೋಕಾಯುಕ್ತರ ಗಮನಕ್ಕೆ ತಂದಿದ್ದ ಸತ್ಯವಾಣಿ ಶ್ರೀಧರ್ ಮಾತನಾಡಿ, ಏಪ್ರಿಲ್ ಆರಂಭದವರೆಗೂ ಅಧಿಕಾರಿಗಳು ಹೂಳು ತೆಗೆಯುತ್ತಿದ್ದರು, ಭಾರಿ ಮಳೆಗೆ ಇಡೀ ಕೆರೆಯಲ್ಲಿ ಗಲೀಜು ನೀರು ತುಂಬಿದ್ದು, ಈಗ ಈ ಮಾರಣಾಂತಿಕ ಮೀನುಗಳನ್ನು ಹೊರಗೆ ತೆಗೆಯುವುದು ಕಷ್ಟ ಎಂದು ತಿಳಿಸಿದರು.
'ಆಫ್ರಿಕನ್ ಕ್ಯಾಟ್ ಫಿಶ್' ಅಪಾಯಕಾರಿ ಜಾತಿಯದಾಗಿದ್ದು, ಸ್ಥಳೀಯ ಜಾತಿಯ ಮೀನುಗಳ ಬೆಳವಣಿಗೆಗೆ ಅವಕಾಶ ನೀಡುವುದಿಲ್ಲ .ಇವು ಹೊಟ್ಟೆಬಾಕತನದ ಮೀನುಗಳು ಎಂದು ಖ್ಯಾತ ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ.
ಈ ಜಾತಿಯ ಮೀನುಗಳು ಕೆರೆ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ಇವುಗಳು ಸ್ಥಳೀಯ ಮೀನುಗಳನ್ನು ತಿನ್ನುವುದರಿಂದ ವಲಸೆ ಹಕ್ಕಿಗಳ ಮೇಲೆ ಪರಿಣಾಮ ಬೀರುತ್ತದೆ. ಪಕ್ಷಿಗಳಿಗೆ ಮೀನು ಸಿಗದಿದ್ದರೆ ಹೊಸ ಆವಾಸಸ್ಥಾನವನ್ನು ಹುಡುಕುತ್ತವೆ. ಇಂತಹ ಮೀನುಗಳನ್ನು ಮುಂಬೈನಲ್ಲಿ ಸ್ಥಳೀಯ ಮೀನುಗಾರರು ಮಾರಾಟ ಮಾಡುತ್ತಾರೆ ಮತ್ತು ಅದು ಜೀವಂತವಾಗಿದ್ದರೆ, ಹೆಚ್ಚಿನ ಆದಾಯವನ್ನು ಪಡೆಯುತ್ತದೆ ಎಂದು ಅವರು ಹೇಳಿದರು.
ವಿಭೂತಿಪುರ ಕೆರೆಯಲ್ಲಿ ಆಫ್ರಿಕನ್ ಕ್ಯಾಟ್‌ಫಿಶ್ ಇರುವುದು ನಮಗೆ ತಿಳಿದಿಲ್ಲ, ಇದು ಮಳೆನೀರು ಚರಂಡಿಗಳ ಮೂಲಕ ಪ್ರವೇಶಿಸಿರಬಹುದು. ಈ ಸಂಬಂಧ ಮೀನುಗಾರಿಕಾ ಇಲಾಖೆಯೊಂದಿಗೆ ಚರ್ಚಿಸುವುದಾಗಿ ಬಿಬಿಎಂಪಿ ಕೆರೆಗಳ ಕಾರ್ಯಪಾಲಕ ಎಂಜಿನಿಯರ್ ನಿತ್ಯಾ ಜೆ ಹೇಳಿದರು.
Advertisement