
ಬೆಂಗಳೂರು: ನಗರದ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೆ ಪ್ರಯಾಣಿಕರಿಂದ ಶುಲ್ಕ ವಸೂಲಿ ಮಾಡುತ್ತಿರುವುದರ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವಕೀಲರು ಹಾಗೂ ಕಾರ್ಯಕರ್ತೆಯರ ನೇತೃತ್ವದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರು ಸೋಮವಾರ ಹೈಕೋರ್ಟ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 12 ನಿಲ್ದಾಣಗಳಲ್ಲಿನ ಶೌಚಾಲಯಗಳ ನಿರ್ವಹಣೆಯನ್ನು ಸುಲಭ್ ಇಂಟರ್‌ನ್ಯಾಶನಲ್‌ಗೆ ಹೊರಗುತ್ತಿಗೆ ನೀಡಿದ್ದು, ಇದೀಗ ಬಳಕೆದಾರರಿಂದ ಮೂತ್ರ ವಿಸರ್ಜನೆಗೆ ರೂ. 2 ಮತ್ತು ಶೌಚಾಲಯಕ್ಕೆ 5 ರೂ. ವಸೂಲಿ ಮಾಡಲಾಗುತ್ತಿದೆ.
ಇತ್ತೀಚಿನ ಶೇ. 71 ರಷ್ಟು ಮೆಟ್ರೋ ಪ್ರಯಾಣ ದರ ಹೆಚ್ಚಳದ ನಂತರ ಇದೀಗ ಶೌಚಾಲಯ ಬಳಕೆಗೆ ಶುಲ್ಕ ವಿಧಿಸಿರುವುದು ದೈನಂದಿನ ಪ್ರಯಾಣಿಕರಿಗೆ ಹೊರೆಯಾಗಿದ್ದು, ಶೌಚಾಲಯದಂತಹ ಮೂಲಭೂತ ಸೌಕರ್ಯಗಳು ಉಚಿತವಾಗಿರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಶೌಚಾಲಯ ಬಳಕೆಗೆ ಶುಲ್ಕ ವಿಧಿಸಿರುವುದು ಹೆಚ್ಚುವರಿ ಹೊರೆಯಾಗಲಿದೆ. ಶುದ್ಧ ಶೌಚಾಲಯಗಳು ಮತ್ತು ಕುಡಿಯುವ ನೀರು ಮೂಲಭೂತ ಅವಶ್ಯಕತೆಗಳಾಗಿವೆ, ಪ್ರೀಮಿಯಂ ಸೇವೆಗಳಲ್ಲ ಎಂದು 2015 ರಿಂದ ಮೆಟ್ರೋದಲ್ಲಿ ಉಚಿತ ಮೂಲ ಸೌಕರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಟಿ ನರಸಿಂಹ ಮೂರ್ತಿ ಹೇಳಿದರು.
2015ರ ಮೇ 1ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವರಾಗಿದ್ದ ಎಂ.ವೆಂಕಯ್ಯ ನಾಯ್ಡು ಅವರು ನಾಗಸಂದ್ರ ಮೆಟ್ರೊ ನಿಲ್ದಾಣದ ಉದ್ಘಾಟನೆ ಸಂದರ್ಭದಲ್ಲಿಯೇ ಈ ಬೇಡಿಕೆ ಎತ್ತಿದ್ದೆ. ಈ ಸಂದರ್ಭದಲ್ಲಿ ನನ್ನನ್ನು ಬಂಧಿಸಲಾಗಿತ್ತು ಎಂದು ಅವರು ತಿಳಿಸಿದರು.
ಈ ಕುರಿತ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆ ಇನ್ನೂ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಬಾಕಿ ಉಳಿದಿದ್ದು, ಮುಂದಿನ ವಿಚಾರಣೆಯನ್ನು ಜೂನ್ 17 ಕ್ಕೆ ನಿಗದಿಪಡಿಸಲಾಗಿದೆ. BMRCL ವಿರುದ್ಧ ಲೋಕಾಯುಕ್ತಕ್ಕೆ ಪ್ರತ್ಯೇಕ ದೂರು ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದರು.
Advertisement