
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 37 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.
ಕೋವಿಡ್ ಪಾಸಿಟಿವ್ ಸೋಂಕಿತರು ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಕೋವಿಡ್ ಟೆಸ್ಟಿಂಗ್ ಕೂಡ ಬೆಂಗಳೂರಿನಲ್ಲಿ ಹೆಚ್ಚಿಸಲಾಗಿದೆ. ಇಂದಿಗೆ ರಾಜ್ಯದಲ್ಲಿ ಒಟ್ಟು 80 ಕೋವಿಡ್ ಪಾಸಿಟಿವ್ ಸಕ್ರಿಯ ಪ್ರಕರಣಗಳು ಕಂಡುಬಂದಿದ್ದು, ಬೆಂಗಳೂರಿನಲ್ಲೇ 73 ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದು ರಾಜ್ಯದಲ್ಲಿ ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. ಆರೋಗ್ಯ ಇಲಾಖೆ ಕೋವಿಡ್ ಪರಿಸ್ಥಿತಿಯ ನಿಗಾ ವಹಿಸಿದ್ದು, ಹತೋಟಿಗೆ ತರಲು ಕ್ರಮಗಳನ್ನ ಕೈಗೊಳ್ಳುತ್ತಿದೆ. ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಂದು ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಇಂದು 191 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 37 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಒಟ್ಟು 80 ಸಕ್ರಿಯೆ ಪ್ರಕರಣಗಳಿದ್ದು, ನಾಲ್ವರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Advertisement