
ಬೆಂಗಳೂರು: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ, ಕಲ್ಯಾಣ ಮಂಡಳಿ ರಚನೆ ಕುರಿತ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಸಹಿ ಹಾಕಿದ್ದಾರೆ.
ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ್ದ 'ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸುಗ್ರೀವಾಜ್ಞೆ -2025'ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಇ-ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕಂಪನಿಗಳ ಡೆಲಿವರಿ ಬಾಯ್ಸ್‌ಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಈ ಸುಗ್ರೀವಾಜ್ಞೆ ರೂಪಿಸಿದೆ.
ರಾಜ್ಯದಲ್ಲಿ ಗಿಗ್ ಕಾರ್ಮಿಕರ ಸಂಖ್ಯೆ ಸುಮಾರು 2.30 ಲಕ್ಷದಷ್ಟಿದೆ. ಆದರೆ ಇವರಿಗೆ ಅಪಘಾತ ಪರಿಹಾರ ಸೇರಿ ಯಾವುದೇ ಸರ್ಕಾರಿ ಸೌಲಭ್ಯಗಳು ಇಲ್ಲ. ಅಪಘಾತ ಅಥವಾ ಮರಣ ಸಮಯದಲ್ಲಿ ಅವರನ್ನು ಅವಲಂಬಿಸಿದವರು ಸಂಕಷ್ಟಕ್ಕೆ ಒಳಗಾಗುತ್ತಾರೆ.
ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆಯ ಮೂಲಕ ಗಿಗ್ ಕಾರ್ಮಿಕರಿಗೆ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಹೆರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಭವಿಷ್ಯನಿಧಿ, ವಸತಿ ಸೌಲಭ್ಯ, ಕೌಶಲಾಭಿವೃದ್ಧಿ ಹಾಗೂ ವೃದ್ಧಾಪ್ಯ ನೇರವು ಸೇರಿದಂತೆ ಇತರೆ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಲು ಸರಕಾರ ಚಿಂತಿಸಿದ್ದು, ಅದಕ್ಕಾಗಿ 'ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ' ಸ್ಥಾಪಿಸಲಾಗುತ್ತಿದೆ.
ಅಗ್ರಿಗೇಟರ್ ಸಂಸ್ಥೆಗಳು ವಹಿವಾಟಿನಿಂದ ಪಡೆಯುವ ಆದಾಯದ ಕನಿಷ್ಠ ಶೇ. 1 ಹಾಗೂ ಗರಿಷ್ಠ ಶೇ. 5ರಷ್ಟು ಹಣವನ್ನು ಮಂಡಳಿಗೆ ಸಂಗ್ರಹಿಸುವುದು. ಆ ಹಣವನ್ನು ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಬಳಸುವುದು ಸುಗ್ರೀವಾಜ್ಞೆಯ ಉದ್ದೇಶವಾಗಿದೆ.
ಈ ಮಂಡಳಿಗೆ ಕಾರ್ಮಿಕ ಸಚಿವರು ಪದನಿಮಿತ್ತ ಅಧ್ಯಕ್ಷರಾಗಿದ್ದು, ಕಾರ್ಮಿಕ ಇಲಾಖೆ ಮತ್ತು ಮಾಹಿತಿ -ತಂತ್ರಜ್ಞಾನ ಇಲಾಖೆಗಳ ಎಸಿಎಸ್ ಅಥವಾ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ ಹಾಗೂ ವಾಣಿಜ್ಯ ಇಲಾಖೆ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಮಂಡಳಿ ಸದಸ್ಯರಾಗಿ ನಾಲ್ವರು ಗಿಗ್ ಕಾರ್ಮಿಕರ ಪ್ರತಿನಿಧಿಗಳ ನಾಮನಿರ್ದೇಶನಕ್ಕೆ ಅವಕಾಶವಿರುತ್ತದೆ.
ಇದರ ಜೊತೆಗೆ ರಾಜ್ಯಪಾಲರು ಮತ್ತೆರಡು ಸುಗ್ರೀವಾಜ್ಞೆಗಳಿಗೂ ಅಂಕಿತ ಹಾಕಿದ್ದಾರೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದಂತೆ 'ರಾಜ್ಯ ಸಿವಿಲ್ ಸೇವೆಗಳ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿ ವರ್ಗಾವಣೆ ನಿಯಂತ್ರಣ (ತಿದ್ದುಪಡಿ) ಸುಗ್ರೀವಾಜ್ಞೆ -2025' ಹಾಗೂ 'ಕರ್ನಾಟಕ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಸುಗ್ರೀವಾಜ್ಞೆ -2025' ಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನಿಗದಿಪಡಿಸಿದಷ್ಟು ಕರ್ತವ್ಯವನ್ನು ಸಲ್ಲಿಸದ ವೈದ್ಯಾಧಿಕಾರಿ ಅಥವಾ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಹುದ್ದೆಗೇ ವರ್ಗಾವಣೆ ಮಾಡಬೇಕು. ವಿಶೇಷ ತಜ್ಞ ವೈದ್ಯರು, ಹಿರಿಯ ವಿಶೇಷ ತಜ್ಞ ವೈದ್ಯರನ್ನು ಅವರು ಹೊಂದಿರುವ ವಿಶೇಷ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಗುರುತಿಸಿದ ಹುದ್ದೆಗೆ ವರ್ಗಾವಣೆ ಮಾಡಬೇಕು. ವೈದ್ಯಾಧಿಕಾರಿ ಮತ್ತು ಇತರ ಸಿಬ್ಬಂದಿಯ ಶೇ 15ರಷ್ಟು ವರ್ಗಾವಣೆ ಹಾಗೂ ಮಹತ್ವದ ಖಾಲಿ ಹುದ್ದೆಗಳಿಗೆ ರಾಜ್ಯ ಸರ್ಕಾರವು ಕೌನ್ಸೆಲಿಂಗ್ ಇಲ್ಲದೆಯೂ ನಿಯೋಜಿಸಲು ಈ ಸುಗ್ರೀವಾಜ್ಞೆಯ ಮೂಲಕ ಅವಕಾಶ ನೀಡಲಾಗಿದೆ.
ಇನ್ನು ಗ್ರಾಮೀಣ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ನಗರ ಪ್ರದೇಶಗಳಲ್ಲಿನ ಹುದ್ದೆಗಳಿಗೆ ಎಂಬಿಬಿಎಸ್ ಪದವೀಧರರನ್ನು ನೇಮಿಸಲು 'ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಸುಗ್ರೀವಾಜ್ಞೆ' ಅವಕಾಶ ಕಲ್ಪಿಸಲಿದೆ. ಅಲ್ಲದೆ, ಸರ್ಕಾರಿ ಕೋಟಾದಡಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಆದ್ಯತೆಯಲ್ಲಿ ತುಂಬಲು ಮತ್ತು ಉಳಿದ ಖಾಲಿ ಹುದ್ದೆಗಳಿಗೆ ಸಾಂಸ್ಥಿಕ ಕೋಟಾದಡಿ ಓದಿದ ವಿದ್ಯಾರ್ಥಿಗಳಿಂದ ತುಂಬಲು ಹಾಗೂ ಉಳಿದ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇವೆಯಿಂದ ವಿನಾಯಿತಿ ನೀಡಲು ಕೂಡಾ ಅವಕಾಶ ನೀಡಲಿದೆ.
Advertisement