
ಬೆಂಗಳೂರು: ಭಾರತೀಯ ಸಶಸ್ತ್ರ ಪಡೆಗಳ ಗೌರವಾರ್ಥ ‘ಜೈ ಹಿಂದ್ ಸಭಾ’ ಎಂಬ ವಿಶೇಷ ಕಾರ್ಯಕ್ರಮವನ್ನು ನಗರದ ಟೌನ್ ಹಾಲ್ ನಲ್ಲಿಂದು ರಾಜ್ಯ ಸರ್ಕಾರದಿಂದ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಸೇನಾ ಅಧಿಕಾರಿಗಳು ಹಾಗೂ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ದೇಶಸೇವೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಗಳನ್ನು ಗೌರವಿಸಲಾಯಿತು.
ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್ (ಅಶೋಕ ಚಕ್ರ ಪುರಸ್ಕೃತ), ಕರ್ನಲ್ ಜೋಜನ್ ಥಾಮಸ್ (ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ), ಮೇಜರ್ ಎಂ.ಸಿ. ಮುತ್ತಣ್ಣ (ಶೌರ್ಯ ಚಕ್ರ ಪುರಸ್ಕೃತ), ಮೇಜರ್ ಗಣೇಶ್ ಮದ್ದಪ್ಪ (ಶೌರ್ಯ ಚಕ್ರ ಪುರಸ್ಕೃತ), ಕ್ಯಾಪ್ಟನ್ ಎಂ.ವಿ. ಪಂಜಾಲ್ (ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ), ಮೇಜರ್ ಮೋಹನ್ ಗಂಗಾಧರನ್ (ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ), ಮೇಜರ್ ಶಫೀಕ್ ಮೊಹಮ್ಮದ್ ಖಾನ್, ಮತ್ತು ಕರ್ನಲ್ ರಾಮಮೂರ್ತಿ (ಸೇನಾ ಪದಕ ಪುರಸ್ಕೃತ) ಅವರ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಹಿರಿಯ ಸೇನಾ ಅಧಿಕಾರಿಗಳು ಹಾಗೂ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಿಲಿಟರಿ ಕ್ಯಾಂಟೀನ್ ಗಳಿಗೆ ಅಬಕಾರಿ ಸುಂಕ ಮುಕ್ತ: 'ಜೈ ಹಿಂದ್ ಸಭಾ' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯುತ್ತಾ, ದೇಶವಾಸಿಗಳ ಪ್ರಾಣ, ಆಸ್ತಿಪಾಸ್ತಿಗಳ ರಕ್ಷಣೆಯ ಮಹತ್ತರ ಕರ್ತವ್ಯವನ್ನು ಮಾಡುತ್ತಿರುವುದು ನಮ್ಮ ಹೆಮ್ಮೆಯ ಸೈನಿಕರು. ಇದೇ ಕಾರಣಕ್ಕೆ ತಂದೆ - ತಾಯಿ, ಶಿಕ್ಷಕರು, ವೈದ್ಯರು, ಅನ್ನದಾತರಂತೆ ಸೈನಿಕರನ್ನು ಸ್ಮರಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ದೇಶ ಕಾಯುತ್ತಿರುವ ಸೈನಿಕರನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದೆ. ಸೈನಿಕರ ಕಲ್ಯಾಣ ಕಾರ್ಯಗಳಿಗೆ ಸದಾ ಬದ್ಧರಿದ್ದೇವೆ, ಈ ಉದ್ದೇಶದಿಂದ ಮಿಲಿಟರಿ ಕ್ಯಾಂಟೀನ್ ಗಳಿಗೆ ಇನ್ನುಮುಂದೆ ಅಬಕಾರಿ ಸುಂಕ ವಿಧಿಸಲಾಗುವುದಿಲ್ಲ ಎಂದು ಘೋಷಣೆ ಮಾಡಿದರು.
ಇದೇ ಶಿಷ್ಟರ ರಕ್ಷಣೆ – ದುಷ್ಟರ ಸಂಹಾರದ ನಿಜ ಅರ್ಥ; ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೈನಿಕರು ಉಗ್ರರ ಅಡಗುದಾಣಗಳು ಮತ್ತು ತರಬೇತಿ ಕೇಂದ್ರಗಳನ್ನೇ ಗುರಿಯಾಗಿಸಿ ದಾಳಿ ಮಾಡಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಇಡೀ ಆಪರೇಷನ್ ಅನ್ನು ಯಶಸ್ವಿಗೊಳಿಸಿದರು. ಇದೇ ಶಿಷ್ಟರ ರಕ್ಷಣೆ – ದುಷ್ಟರ ಸಂಹಾರದ ನಿಜ ಅರ್ಥವಾಗಿದೆ. ಭಯೋತ್ಪಾದಕರನ್ನು ಸಲಹುತ್ತಾ, ಅಮಾಯಕ ಜನರ ಮಾರಣ ಹೋಮಕ್ಕೆ ಕಾರಣರಾಗುವ ಪಾಕಿಸ್ತಾನಕ್ಕೆ ನಮ್ಮ ಹೆಮ್ಮೆಯ ಸೈನಿಕರು ನೀಡಿರುವ ಉತ್ತರ 145 ಕೋಟಿ ಭಾರತೀಯರಿಗೂ ಹೆಮ್ಮೆಯುಂಟು ಮಾಡಿದೆ ಎಂದು ಶ್ಲಾಘಿಸಿದರು.
ಮಾಜಿ ಯೋಧರ ಕಲ್ಯಾಣಕ್ಕಾಗಿ ನಿಗಮ ಸ್ಥಾಪನೆ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಮಾಜಿ ಯೋಧರ ಕಲ್ಯಾಣಕ್ಕಾಗಿ ಒಂದು ನಿಗಮ ಸ್ಥಾಪಿಸುವ ಬಗ್ಗೆ ಚಿಂತಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ಕರ್ನಾಟಕ ಸರ್ಕಾರವು ಮಾಜಿ ಯೋಧರು ಮತ್ತು ಅವರ ಕುಟುಂಬಗಳಿಗೆ ಶಕ್ತಿ ನೀಡಲು ಸದಾ ಸಿದ್ಧವಿದೆ ಎಂದು ಹೇಳಿದರು.
Advertisement