
ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ ನೀಡುವುದರ ಮೂಲಕ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ನಟ ಕಮಲ್ ಹಾಸನ್ ಅವರ ಮುಂದಿನ 'ಥಗ್ ಲೈಫ್' ನಿಷೇಧಿಸಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ.
ನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊರಗಡೆ ಇಂದು ಪ್ರತಿಭಟನೆ ನಡೆಸಿದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ಕಮಲ್ ಹಾಸನ್ ಅಭಿನಯದ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದು. ಆ ಚಿತ್ರವನ್ನು ನಿಷೇಧಿಸಬೇಕು, ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ನಟ ಕಮಲ್ ಹಾಸನ್ ಅವರು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ಥಗ್ ಲೈಫ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ. ನಟ ಶಿವರಾಜ್ ಕುಮಾರ್ ಕೂಡಾ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರವೀಣ್ ಶೆಟ್ಟಿ ಬುಧವಾರ ಮಧ್ಯಾಹ್ನ ಫಿಲ್ಮಂ ಛೇಂಬರ್ ಅಧ್ಯಕ್ಷರಿಗೆ ಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಕಮಲ್ ಹಾಸನ್ ಅವರ ಹೇಳಿಕೆ ಸ್ವೀಕಾರಾರ್ಹವಲ್ಲಾ. ಇದನ್ನು ಯಾವುದೇ ಕನ್ನಡಿಗರು ಸಹಿಸಲ್ಲ. ಫಿಲ್ಮಂ ಛೇಂಬರ್ ಮಧ್ಯ ಪ್ರವೇಶಿಸಿ ಥಗ್ ಲೈಫ್ ಸಿನಿಮಾವನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಕರ್ನಾಟಕ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡಾ ಈ ಚಿತ್ರವನ್ನು ಬ್ಯಾನ್ ಮಾಡಬೇಕು. ಒಂದು ವೇಳೆ ಕಮಲ್ ಹಾಸನ್ ಕ್ಷಮೆಯಾಚಿಸದಿದ್ದರೆ ಚಿತ್ರಮಂದಿರದ ಹೊರಗಡೆ ಪ್ರತಿಭಟನೆ ನಡೆಸಲಾಗುವುದು, ಏನಾದರೂ ಅಹಿತರ ಘಟನೆಗಳು ಸಂಭವಿಸಿದ್ದರೆ ಸರ್ಕಾರ ಮತ್ತು ಕಮಲ್ ಹಾಸನ್ ಅವರೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾಳೆ ಸಭೆ ನಡೆಸಿ ತೀರ್ಮಾನ: ಎಂ.ನರಸಿಂಹಲು
'ಥಗ್ ಲೈಫ್ 'ಬ್ಯಾನ್ ಕುರಿತು ಚರ್ಚಿಸಲು ಕನ್ನಡ ಚಿತ್ರರಂಗದ ಎಲ್ಲಾ ಪಾಲುದಾರರರೊಂದಿಗೆ ನಾಳೆ ಸಭೆ ನಡೆಸಿ, ಮಧ್ಯಾಹ್ನದೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದ್ದಾರೆ.
ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಕೆಎಫ್ ಸಿಸಿ ನಿಕಟಪೂರ್ವ ಅಧ್ಯಕ್ಷ ಎಂಕೆ ಸುರೇಶ್ ಒತ್ತಾಯಿಸಿದರು. ಕಮಲ್ ಹಾಸನ್ ಆ ರೀತಿಯ ಹೇಳಿಕೆ ನೀಡಬಾರದು, ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು:
ಅಲ್ಲದೇ, ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ಶೆಟ್ಟಿ ದೂರು ದಾಖಲಿಸಿದ್ದು, ಕಮಲ್ ಹಾಸನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಅವರ ಹೇಳಿಕೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದು ಮಾತ್ರವಲ್ಲದೇ, ಕನ್ನಡಿಗರು ಮತ್ತು ತಮಿಳರ ನಡುವೆ ವಿಷದ ಬೀಜ ಬಿತ್ತುವುದನ್ನು ತೋರಿಸುತ್ತದೆ. ಕನ್ನಡಿಗರ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವುದೇ ಹೊಸ ತಮಿಳು ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರಂತರವಾಗಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಹೇಳಿಕೆಗಳು ಕನ್ನಡಿಗರು ಮತ್ತು ತಮಿಳರ ನಡುವೆ ಶಾಂತಿ, ಸೌಹಾರ್ದತೆಯನ್ನು ಹದೆಗೆಡಿಸುತ್ತವೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ದೂರನ್ನು ಸ್ವೀಕರಿಸಿದ್ದೇವೆ ಆದರೆ, ಇಲ್ಲಿಯವರೆಗೂ ಎಫ್ ಐಆರ್ ದಾಖಲಿಸಿಲ್ಲ. ಕಾನೂನು ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಪರ ಕಾರ್ಯಕರ್ತರು ಕಮಲ್ ಹಾಸನ್ ಅವರ ಫೋಟೋಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕರವೇ ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ ಕೂಡಾ ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಅವರಿಗೆ ಕನ್ನಡ ಭಾಷೆ ಬಗ್ಗೆ ಜ್ಞಾನದ ಕೊರತೆ ಇದೆ ಎಂದಿದ್ದಾರೆ.
ಮೈಸೂರು, ಹುಬ್ಬಳ್ಳಿ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಅವರ ಮುಂದಿನ 'ಥಗ್ ಲೈಫ್' ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement