
ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಭೂವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಲ್ಲಿ ತಾತ್ಕಾಲಿಕ ರಿಲೀಫ್ ದೊರೆತಿದ್ದು, ಸುಮಾರು 3400 ಕೋಟಿ ರೂ. ಟಿಡಿಆರ್ ಪಾವತಿಗೆ ತಡೆಯಾಜ್ಞೆ ನೀಡಲಾಗಿದೆ.
ಬೆಂಗಳೂರು ಅರಮನೆ ಮೈದಾನದ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ತಾತ್ಕಾಲಿಕ ರಿಲೀಫ್ ನೀಡಿದೆ.
ಸುಮಾರು 3,400 ಕೋಟಿ ರೂ. ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ಅಥವಾ ಟಿಡಿಆರ್ ಸರ್ಟಿಫಿಕೇಟ್ (TDR certificate) ಅನ್ನು ರಾಜಮನೆತನಕ್ಕೆ ಹಸ್ತಾಂತರ ಮಾಡಬೇಕೆಂದು ಈ ಹಿಂದೆ ನೀಡಿದ್ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ನ್ಯಾ.ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದ್ದು, ಮರುಪರಿಶೀಲನಾ ಅರ್ಜಿಯ ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ಹಾಗೂ ಮುಖ್ಯ ಸಿವಿಲ್ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದೆ.
ಬೆಂಗಳೂರು ಅರಮನೆ ಮೈದಾನದ ಬಳಿ ರಸ್ತೆ ಅಗಲೀಕರಣಕ್ಕಾಗಿ ಒಟ್ಟು 15.36 ಎಕರೆ ಜಮೀನು ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಇದರ ವಿರುದ್ಧ ರಾಜಮನೆತನದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎಕರೆಗೆ 200 ಕೋಟಿ ರೂಪಾಯಿಯಂತೆ 3,400 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಆದರೆ ಟಿಡಿಆರ್ ನೀಡಲು ಒಪ್ಪದ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ ಹೂಡಿತ್ತು. ಹೀಗಾಗಿ ಸುಗ್ರೀವಾಜ್ಞೆ ಮತ್ತು ಪರಿಹಾರ ನೀಡದ್ದಕ್ಕೆ ರಾಜಮನೆತನ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮೇ 22 ರಂದು ಟಿಡಿಆರ್ ಪಾವತಿ ಮಾಡುವಂತೆ ಆದೇಶ ನೀಡಿತ್ತು. ಆ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದೀಗ ಟಿಡಿಆರ್ ಹಸ್ತಾಂತರಕ್ಕೆ ತಡೆ ನೀಡಿದೆ. ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ ಶಶಿ ಕಿರಣ್ ಶೆಟ್ಟಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದರು.
Advertisement