
ಬೆಂಗಳೂರು: ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಅವರ ಪ್ರತಿಕೃತಿ ದಹಿಸಿದ ಆರೋಪದ ಮೇಲೆ ಕನ್ನಡ ಕಾರ್ಯಕರ್ತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಸವೇಶ್ವರನಗರದ ಪವಿತ್ರ ಪ್ಯಾರಡೈಸ್ ವೃತ್ತದ ಬಳಿ ಕಮಲ್ ಹಾಸನ್ ಪೋಸ್ಟರ್ ಅನ್ನು ಸುಟ್ಟು ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೇ 28 ರಂದು ರಾತ್ರಿ 11.45 ರ ಸುಮಾರಿಗೆ, ನಮ್ಮ ಕರುನಾಡ ಯುವ ಸೇನೆಯ ಅಧ್ಯಕ್ಷ ರವಿಕುಮಾರ್ ಅವರು, ಪವಿತ್ರ ಪ್ಯಾರಡೈಸ್ ವೃತ್ತದ ಬಳಿ ಜಮಾಯಿಸಿ ಕಮಲ್ ಹಾಸನ್ ಅವರ ಪೋಸ್ಟರ್‌ಗಳನ್ನು ಸುಡಲು ಪ್ರಾರಂಭಿಸಿದರು. ಅವರ ಈ ಕೃತ್ಯವು ಸಾರ್ವಜನಿಕ ಶಾಂತಿಯನ್ನು ಕದಡಿದ್ದಲ್ಲದೆ, ಮಧ್ಯರಾತ್ರಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ದೂರಿನ ಆಧಾರದ ಮೇಲೆ, ಕನ್ನಡ ಪರ ಸಂಘಟನೆಯ ಅಧ್ಯಕ್ಷರ ವಿರುದ್ಧ ನಿನ್ನೆ(ಗುರುವಾರ) ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 270 ಮತ್ತು 283 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಅವರು ತಿಳಿಸಿದ್ದಾರೆ.
ನಟ-ರಾಜಕಾರಣಿ ಕಮಲ್ ಹಾಸನ್ ಅವರು ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 'ಥಗ್ ಲೈಫ್' ಪ್ರಚಾರ ಕಾರ್ಯಕ್ರಮದಲ್ಲಿ "ಕನ್ನಡ ತಮಿಳಿನಿಂದ ಹುಟ್ಟಿದೆ" ಎಂದು ಹೇಳಿದ್ದು, ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
Advertisement