
ಬೆಂಗಳೂರು: ಹೊಸ ಕಾರ್ಮಿಕ ಸಂಹಿತೆ ಜಾರಿಗೆ ತರಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ 29 ಲೇಬರ್ ಕಾಯ್ದೆಗಳಿವೆ. ಇವು ಬ್ರಿಟಿಷರ ಕಾಲದ ಕಾಯ್ದೆಗಳಾಗಿವೆ. ಹೀಗಾಗಿ ಈ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ನಾಲ್ಕು ಕಾರ್ಮಿಕ ಕೋಡ್ ಗಳಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.
ಈಗಾಗಲೇ ಬಹುತೇಕ ರಾಜ್ಯಗಳು ಸಕಾರಾತ್ಮಕ ಅಭಿಪ್ರಾಯ ತಿಳಿಸಿವೆ. ಕಾರ್ಮಿಕ ಯೂನಿಯನ್‌ಗಳಲ್ಲಿ ಸಣ್ಣ ಪ್ರಮಾಣದ ಗೊಂದಲಗಳಿದ್ದು, ಚರ್ಚೆ ಮುಖಾಂತರ ಆ ಗೊಂದಲಗಳನ್ನು ನಿವಾರಿಸಿ ಈ ವರ್ಷದೊಳಗೆ ನಾಲ್ಕು ಕಾರ್ಮಿಕ ಕೋಡ್ ಗಳನ್ನು ಸಂಸತ್‌ನಲ್ಲಿ ಮಂಡಿಸಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನವದೆಹಲಿಯಲ್ಲಿ ನಡೆದ ಮೂರು ದಿನಗಳ ಪಾಲುದಾರರ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಎಂಎಸ್ಎಂಇ ಸಭೆಗಳಿಗೆ ಹಾಜರಾಗಲಿಲ್ಲ. ಇದು ಬೇಸರ ತರಿಸಿದೆ ಎಂದರು.
ಜರ್ಮನಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಥೈಲ್ಯಾಂಡ್‌ಗೆ ಕಳುಹಿಸಿದ ಹಿನ್ನೆಲೆಯಲ್ಲಿ ವಂಚನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಸುಳ್ಯದ ಪಟ್ಟಣದ ಯುವಕನ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಯುವಕರು ಸರ್ಕಾರದ ಅಧಿಕೃತ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಕಂಪನಿಗಳಿಗೆ ಮಾತ್ರ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.
ಆಯುಷ್ಮಾನ್ ಆರೋಗ್ಯ ಕಾರ್ಡ್ ಕುರಿತು ಮಾತನಾಡಿ, ಆಯುಷ್ಮಾನ್ ಯೋಜನೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಇಎಸ್‌ಐಸಿ ಚಂದಾದಾರರು ನಗದುರಹಿತವಾಗಿ ಚಿಕಿತ್ಸೆ ಪಡೆಯಬಹುದು. ಅದರ ವೆಚ್ಚವನ್ನು ಇಎಸ್ಐಸಿ ಭರಿಸಲಿದೆ. ಈ ಬಗ್ಗೆ ಶೀಘ್ರವೇ, ನಿಯಮಗಳಲ್ಲಿ ಬದಲಾವಣೆ ಮಾಡಿ, ಆದೇಶ ಹೊರಡಿಸಲಾಗುತ್ತದೆ. ದೊಡ್ಡಬಳ್ಳಾಪುರದಲ್ಲಿ 150 ಕೋಟಿ ರೂ. ಹೂಡಿಕೆ ಮಾಡಿ ಇಎಸ್‌ಐ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ. ಆದರೆ, ತಜ್ಞ ವೈದ್ಯರ ಕೊರತೆಯಿಂದಾಗಿ ರಾಜ್ಯ ಸರ್ಕಾರ ಅದನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿಲ್ಲ ಎಂದು ಹೇಳಿದರು.
ದೇಶ ಸೇರಿದಂತೆ ವಿದೇಶಗಳ ಕಂಪನಿಗಳಿಗೆ ಕೌಶಲಯುತ ಉದ್ಯೋಗಿಗಳ ಅಗತ್ಯವಿದೆ. ಹೀಗಾಗಿ, ರಾಜ್ಯ ಸರ್ಕಾರ ಪೀಣ್ಯದಲ್ಲಿ ನೀಡಿರುವ ಭೂಮಿಯಲ್ಲಿ ಎನ್‌ಎಸ್‌ಐಸಿ ತಾಂತ್ರಿಕ ಸೇವಾ ಕೇಂದ್ರ (ಎನ್‌ಟಿಎಸ್‌ಸಿ) ಸ್ಥಾಪಿಸಲಾಗುತ್ತದೆ. ಮುಂದಿನ ತಲೆಮಾರಿನ ಎಐ, ಏರೊನಾಟಿಕ್ಸ್ ಸೇರಿದಂತೆ ಅತ್ಯುನ್ನತ ತಂತ್ರಜ್ಞಾನದ ಕೌಶಲಯುತ ತರಬೇತಿ ನೀಡಲಾಗುತ್ತದೆ. ದೆಹಲಿಯಲ್ಲಿರುವ ಕೇಂದ್ರಕ್ಕಿಂತ ಉನ್ನತಮಟ್ಟದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
Advertisement