

ಶ್ರೀರಂಗಪಟ್ಟಣ: ಬಟ್ಟೆ ತೊಳೆಯಲು ನಾಲೆಗೆ ಹೋಗಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಾದೇವಪುರ ಬೋರೆ ಗ್ರಾಮದ ರಾಮಸ್ವಾಮಿ ನಾಲೆಯಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಅಫ್ರಿನ್ (13), ಹನಿ (14), ತರ್ಬಿಮ್ (13) ಮತ್ತು ಆಯೇಷಾ (14) ಎಂದು ಗುರುತಿಸಲಾಗಿದೆ. ಮೈಸೂರಿನ ಶಾಂತಿನಗರದಲ್ಲಿರುವ ಮದರಸಾದಿಂದ ಮೂವರು ಸಿಬ್ಬಂದಿಗಳೊಂದಿಗೆ ಒಟ್ಟು 15 ಮಕ್ಕಳು ಟಾಟಾ ಎಸ್ ನಲ್ಲಿ ಮಂಡ್ಯದಕೊಪ್ಪಲು ಬಳಿಯ ರಾಮಸ್ವಾಮಿ ಅಣೆಕಟ್ಟೆಯ ನಾಲೆ ಬಳಿ ಬಂದು ತಮ್ಮ ಬಟ್ಟೆ ಒಗೆದು, ಪಾತ್ರೆಗಳನ್ನು ತೊಳೆದು ಒಣಗಲು ಹಾಕಿದ್ದರು.
ನಂತರ ಎಲ್ಲರೂ ಮೈಸೂರಿಗೆ ಮತ್ತೆ ಹೊರಡುವ ವೇಳೆ ಅಣೆಕಟ್ಟೆ ಬಳಿ ಬಟ್ಟೆ, ಪಾತ್ರೆಗಳನ್ನು ತರಲು ಹೋದ ಓರ್ವ ವಿದ್ಯಾರ್ಥಿ ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿ ಹೋಗಿದ್ದಾನೆ. ಇದನ್ನು ನೋಡಿದ ಇತರೆ ವಿದ್ಯಾರ್ಥಿನಿಯರು ಆತನನ್ನು ರಕ್ಷಿಸಲು ಒಬ್ಬರಂತೆ ಒಬ್ಬರು ಸೇರಿ ಒಟ್ಟು ಆರು ಮಂದಿ ನಾಲೆಗೆ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದರು.
ಈ ವೇಳೆ ಸ್ಥಳೀಯರು ಮೂವರನ್ನು ನೀರಿನಿಂದ ರಕ್ಷಣೆ ಮಾಡಿ ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದರು. ಓರ್ವ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ವಿದ್ಯಾರ್ಥಿ ಸೇರಿದಂತೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿಯಿಂದಲೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಂಡು ಭಾನುವಾರ ಮುಂದುವರೆಸಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಶವಗಳನ್ನು ಹುಡುಕಿದ್ದಾರೆ.
Advertisement