

ಬೆಂಗಳೂರು: ಬೆಂಗಳೂರು ಮೂಲದ ಫಿಟ್ ನೆಸ್ ಕಂಪನಿ ‘ಜೆಜೆ ಆಕ್ಟಿವ್’ ದಿ ಸ್ಯಾರಿ ರನ್(ಸೀರೆ ಓಟ) ಎಂಬ ಓಟದ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಿತ್ತು.
ಜಯನಗರದ ಶಾಲಿನಿ ಮೈದಾನದಲ್ಲಿ ಬಣ್ಣಬಣ್ಣದ ಆಕರ್ಷಕ ಸೀರೆಗಳನ್ನುಟ್ಟ ಸಾವಿರಾರು ನಾರಿಯರು ಭಾಗವಹಿಸಿದ್ದರು. ಈ ಸೀರೆ ಓಟದಲ್ಲಿ ಸುಮಾರು 7000 ಮಹಿಳೆಯರು ನೋಂದಣಿ ಮಾಡಿಕೊಂಡು ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ನಾಟಿಕ್ ಗಾಯಕಿ, ನೃತ್ಯಗಾರ್ತಿ ಹಾಗೂ ಕಲಾವಿದೆ ಶಿವಶ್ರೀ ತೇಜಸ್ವಿ ಸೂರ್ಯ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಕೆ. ರಾಮಮೂರ್ತಿ, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಕಾರ್ಪೊರೇಟರ್ ಕೆ. ಸೋಮಶೇಖರ್ ಹಾಗೂ ಜೆಜೆ ಆಕ್ಟಿವ್‌ನ ಕೋಚ್ ಪ್ರಮೊದ್ ಅವರು ಈ ಸೀರೆ ಓಟವನ್ನು ಉದ್ಘಾಟಿಸಿದರು.
ಸಾಂಪ್ರದಾಯಿಕ ಕಲ್ಪನೆಗಳನ್ನು ಮುರಿಯುವ ಸಂಕೇತವಾಗಿ ಆರಂಭವಾದ ಈ ಸೀರೆ ಓಟ, ಈಗ ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಪ್ರೇರೇಪಿಸುವ ಅಭಿಯಾನವಾಗಿ ಬೆಳೆಯುತ್ತಿದೆ. ಈ ಓಟವು, ಫಿಟ್ನೆಸ್ ಒಂದು ನಿರ್ದಿಷ್ಟ ರೂಪದಲ್ಲಿರಬೇಕೆಂಬ ಕಲ್ಪನೆಗೆ ಸವಾಲು ಹಾಕಿ, ಅಂದ ಮತ್ತು ದೃಢತೆ ಒಂದೇ ಸಮಯದಲ್ಲಿ ಬೆಸೆದುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದೆ.
ಸೀರೆ ಭಾರತೀಯ ಸ್ತ್ರೀಯರ ಜೀವನಶೈಲಿಯ ಅವಿಭಾಜ್ಯ ಅಂಗ. ವಯಸ್ಸು, ಜಾತಿ, ಧರ್ಮ ಮತ್ತು ಆರ್ಥಿಕ ಹಿನ್ನೆಲೆಗಳನ್ನೂ ಮೀರಿ ಇದು ಮಹಿಳೆಯರನ್ನು ಒಗ್ಗೂಡಿಸುತ್ತದೆ. ಸವಾಲುಗಳನ್ನು ಹಂಚಿಕೊಳ್ಳಲು, ಎದುರಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಸೀರೆ ಓಟ ಒಂದು ವೇದಿಕೆ ಕಲ್ಪಿಸುತ್ತಿದೆ.
“ಸೀರೆ ಓಟವು ಬೆಂಗಳೂರಿನಲ್ಲಿ ಎಂಟು ವರ್ಷಗಳ ಹಿಂದೆ ಪ್ರಾರಂಭವಾಯಿತು. ಕಳೆದ ಕೆಲವು ವರ್ಷಗಳಲ್ಲಿ ಇದು ಸ್ಥಳೀಯ ಓಟದಿಂದ ರಾಷ್ಟ್ರಮಟ್ಟದ ಅಭಿಯಾನವಾಗಿ ರೂಪಾಂತರಗೊಂಡಿದೆ. ಸೀರೆ ಕೇವಲ ವಸ್ತ್ರವಲ್ಲ - ಅದು ಶಕ್ತಿ, ಅಸ್ತಿತ್ವ ಮತ್ತು ಪರಂಪರೆಯ ಸಂಕೇತವಾಗಿದೆ. ಸೀರೆ ಓಟದ ಮೂಲಕ ಮಹಿಳೆಯರು ತಮ್ಮ ಶಕ್ತಿಯನ್ನು ಪುನಃ ಅರಿತು, ಆರೋಗ್ಯದತ್ತ ಗಮನ ಹರಿಸಿ, ಹೆಮ್ಮೆಯಿಂದ, ಸ್ವತಂತ್ರವಾಗಿ ಬದುಕಿ ಇತರರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಉದ್ದೇಶ” ಎಂದು ಜೆಜೆ ಆಕ್ಟಿವ್‌ನ ಕೋಚ್ ಪ್ರಮೋದ್ ಅವರು ಹೇಳಿದ್ದಾರೆ
Advertisement