

ಬೆಂಗಳೂರು: ಬಾಗಲೂರಿನ ಅಪಾರ್ಟ್‌ಮೆಂಟ್‌ವೊಂದರ ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಭೀಕರವಾಗಿ ಕೊಲೆ ಮಾಡಿದ್ದ ಆರೋಪದ ಮೇರೆಗೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ನವೆಂಬರ್ 1 ರಂದು ನಡೆದ ಈ ಘಟನೆ ಲಿಫ್ಟ್ ಒಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪುಷ್ಪಲತಾ ಎನ್ನಲಾದ ಮಹಿಳೆ ನಾಯಿ ಮರಿಯೊಂದಿಗೆ ಲಿಫ್ಟ್ ಒಳಗೆ ಪ್ರವೇಶಿಸುತ್ತಿರುವುದು ಕ್ಯಾಮರಾದಲ್ಲಿ ಕಂಡುಬರುತ್ತದೆ.
ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ ಆಕೆ ನಾಯಿಯನ್ನು ನೆಲಕ್ಕೆ ಬಡಿದು ಸ್ಥಳದಲ್ಲೇ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ 23 ವರ್ಷದ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದು, ತನ್ನ ನಾಲ್ಕು ವರ್ಷದ ನಾಯಿ ಗೋಫಿಯನ್ನು ನೋಡಿಕೊಳ್ಳಲು ಪುಷ್ಪಲತಾ ಅವರನ್ನು ತಿಂಗಳಿಗೆ ರೂ.23,000 ಸಂಬಳಕ್ಕೆ ಸೆಪ್ಟೆಂಬರ್ 11 ರಿಂದ ನೇಮಿಸಿಕೊಳ್ಳಲಾಗಿತ್ತು. ನವೆಂಬರ್ 1 ರಂದು ನಾಯಿ ಸಾವನ್ನಪ್ಪಿತ್ತು. ಹೇಗೆ ನಾಯಿ ಸಾವನ್ನಪ್ಪಿತ್ತು ಎಂದು ಪುಷ್ಪಲತಾ ಅವರನ್ನು ಕೇಳಿದಾಗ, ನನಗೆ ಏನು ಗೊತ್ತಿಲ್ಲ ಎಂದು ಹೇಳಿದ್ದರು.
ತದನಂತರ ಸಿಸಿವಿಟಿ ದೃಶ್ಯಾವಳಿ ಪರಿಶೀಲಿಸಿದಾಗ ಲಿಫ್ಟ್ ಬಳಿ ನಾಯಿ ಇರುವುದು ಕಂಡುಬಂದಿತ್ತು. ಆಕೆ ನಾಯಿಯನ್ನು ಲಿಫ್ಟ್ ನೊಳಗೆ ಕರೆದೊಯ್ದು, ನೆಲಕ್ಕೆ ಬಡಿದಿರುವುದರಿಂದ ಅದು ಸಾವನ್ನಪ್ಪಿದೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 325 ( ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ಮಾಡುವ ದುಷ್ಕೃತ್ಯ) ಅಡಿಯಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಾನುವಾರ ಪುಷ್ಪಲತಾ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement