

ಬೆಂಗಳೂರು: ರಾಜ್ಯದಲ್ಲಿ ರೂ. 3,000 ಕೋಟಿ ಹೂಡಿಕೆಯನ್ನು ಕಿರ್ಲೋಸ್ಕರ್ ಫೆರಸ್ ಪ್ರಕಟಿಸಿದೆ. ಉತ್ಪಾದನೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸ್ಥಾವರವನ್ನು ಅಭಿವೃದ್ಧಿಪಡಿಸಲು ರೂ. 3,000 ಕೋಟಿ ಹೂಡಿಕೆ ಮಾಡಲಿದ್ದು, ಸಂಸ್ಥೆಯಲ್ಲಿ ಶೇ. 99 ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡುವುದಾಗಿ ತಿಳಿಸಿರುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಪುಣೆ ರೋಡ್ ಶೋ ಸಂದರ್ಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಪ್ರಮುಖರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸಂಸ್ಥೆಯು ಮುಂದಿನ 3 ವರ್ಷಗಳಲ್ಲಿ ಉಕ್ಕು ತಯಾರಿಕೆಯನ್ನು ವಿಸ್ತರಿಸಲು, ಕಬ್ಬಿಣದ ಅದಿರು ಸಂಸ್ಕರಣೆಯನ್ನು ಹೆಚ್ಚಿಸಲು ಮತ್ತು ಸ್ಪಾಂಜ್ ಪೈಪ್ ಉತ್ಪಾದನೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸ್ಥಾವರವನ್ನು ಅಭಿವೃದ್ಧಿಪಡಿಸಲು ರೂ. 3,000 ಕೋಟಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಸಂಸ್ಥೆ ತನ್ನ ಲಾಭದ ಶೇ. 2ರಷ್ಟು ಅಂಶವನ್ನು ಸಿಎಸ್ಆರ್ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಆರೋಗ್ಯ ಮತ್ತು ಜನಕಲ್ಯಾಣದ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಿರುವುದು ಶ್ಲಾಘನೀಯ ಎಂದಿದ್ದಾರೆ.
ರಾಜ್ಯದಲ್ಲಿ ವಿಪ್ರೋ ಪರಿಯ ವಿಸ್ತರಣೆ:
ಪುಣೆ ರೋಡ್ ಶೋ ಸಂದರ್ಭದಲ್ಲಿ ವಿಪ್ರೋ ಪರಿ ಕಂಪೆನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆಗಿನ ಸಭೆ ಫಲಪ್ರದವಾಗಿದೆ. ಕಂಪನಿಯು ಇತ್ತೀಚೆಗೆ KIADB ಕೈಗಾರಿಕಾ ಪ್ರದೇಶದ ಆದಿನಾರಾಯಣ ಹೊಸಹಳ್ಳಿಯಲ್ಲಿ ತನ್ನ ಹೊಸ ಎಲೆಕ್ಟ್ರಾನಿಕ್ಸ್ ಕಾಪರ್ ಲ್ಯಾಮಿನೇಟ್ ಸೌಲಭ್ಯಕ್ಕಾಗಿ ಶಿಲಾನ್ಯಾಸ ಸಮಾರಂಭವನ್ನು ನಡೆಸಿದ್ದು - ಇದು ಕರ್ನಾಟಕದಲ್ಲಿ ಪ್ರಮುಖ ವಿಸ್ತರಣೆಯನ್ನು ಸೂಚಿಸುತ್ತದೆ.
ಕೈಗಾರಿಕಾ ಪರಿಹಾರಗಳ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟ್ಲಾಸ್ ಕಾಪ್ಕೊ ಕಂಪನಿಯು ಸ್ವೀಡನ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1873ರಲ್ಲಿ ಸ್ಥಾಪಿತವಾದ ಈ ಕಂಪನಿಯು ಒಂದೂವರೆ ಶತಮಾನಕ್ಕೂ ಮೀರಿದ ಇತಿಹಾಸ ಹೊಂದಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ರಾಜ್ಯದ ಕೈಗಾರಿಕಾ ಪರಿಸರ ವ್ಯವಸ್ಥೆ, ಉದ್ಯಮ-ಸ್ನೇಹಿ ನೀತಿಗಳು, ಪ್ರೋತ್ಸಾಹಗಳು ಮತ್ತು ಭವಿಷ್ಯದ ಹೂಡಿಕೆಗಳಿಗೆ ಲಭ್ಯವಿರುವ ಬೆಂಬಲಗಳ ಕುರಿತು ನಾವು ವಿವರವಾದ ಪ್ರಸ್ತುತಿ ನೀಡಿದೆವು. 2021ರಲ್ಲಿ ಬೆಂಗಳೂರು ಮೂಲದ HHV ಪಂಪ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ತನ್ನ ಒಡೆತನಕ್ಕೆ ಸೇರಿಸಿಕೊಂಡಿದ್ದು, ಇದನ್ನು ಅಟ್ಲಾಸ್ ಕಾಪ್ಕೊವಿನ ಭಾರತದ ವಿಸ್ತರಣೆಯ ಒಂದು ಪ್ರಮುಖ ಹಂತವೆಂದು ಗುರುತಿಸಬಹುದಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Advertisement