

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸುವ ಮೂಲಕ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿಯನ್ನು ನವೀನ್ ಕೆ ಎಂದು ಗುರುತಿಸಲಾಗಿದ್ದು, ವೈಟ್‌ಫೀಲ್ಡ್‌ನಲ್ಲಿರುವ ಕಂಪನಿಯೊಂದರಲ್ಲಿ ಡೆಲಿವರಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ದೂರುದಾರರಿಗೆ ನವೀನ್‌ಝೆಡ್ ಎಂಬ ಫೇಸ್‌ಬುಕ್ ಬಳಕೆದಾರ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಆಕೆ ಆತನ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿಕೊಳ್ಳದಿದ್ದರೂ, ಆರೋಪಿ ಮೆಸೆಂಜರ್ ಮೂಲಕ ಕಳೆದ ಮೂರು ತಿಂಗಳಿನಿಂದ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ.
ನಟಿ ಅವನನ್ನು ಬ್ಲಾಕ್ ಮಾಡಿದ ನಂತರ, ಆ ವ್ಯಕ್ತಿ ಹಲವಾರು ಹೊಸ ನಕಲಿ ಖಾತೆಗಳನ್ನು ಸೃಷ್ಟಿಸಿ ತನ್ನ ಖಾಸಗಿ ಭಾಗಗಳನ್ನು ಒಳಗೊಂಡಂತೆ ಹಲವಾರು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾನೆ. ಪದೇ ಪದೆ ಎಚ್ಚರಿಕೆ ನೀಡಿದ್ದರೂ ಕಿರುಕುಳ ಮುಂದುವರೆದಿದೆ ಎಂದು ಅವರು ಆರೋಪಿಸಿದ್ದಾರೆ.
ನವೆಂಬರ್ 1 ರಂದು ಆರೋಪಿ ಮತ್ತೆ ಆಕೆಗೆ ಸಂದೇಶ ಕಳುಹಿಸಿದಾಗ, ಮಹಿಳೆ ಇಲ್ಲಿನ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಲು ಕೇಳಿದ್ದಾರೆ. ನೇರವಾಗಿ ಭೇಟಿಯಾದಾಗ ಇದೆಲ್ಲವನ್ನು ನಿಲ್ಲಿಸುವಂತೆ ಆಕೆ ಒತ್ತಾಯಿಸಿದ್ದಾರೆ. ಅದನ್ನು ನಿರ್ಲಕ್ಷಿಸಿ ಆತ ಅಸಭ್ಯವಾಗಿ ಮಾತನಾಡಿದನೆಂದು ದೂರುದಾರರು ಆರೋಪಿಸಿದ್ದಾರೆ.
ಇದಾದ ನಂತರ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬಂದು ಶಂಕಿತನನ್ನು ಬಂಧಿಸಿದ್ದಾರೆ.
'ಆಕೆಯ ದೂರಿನ ಆಧಾರದ ಮೇಲೆ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 (1)(iii) (ಲೈಂಗಿಕ ಕಿರುಕುಳ), 78 (1) (ii) (ಹಿಂಬಾಲಿಸುವುದು) ಮತ್ತು 79 (ಮಹಿಳೆಯ ಘನತೆಗೆ ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಮತ್ತು ಆರೋಪಿಯನ್ನು ಬಂಧಿಸಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement