

ವಿಜಯಪುರ: ವಿಜಯಪುರದಲ್ಲಿ ಮಂಗಳವಾರ ಬೆಳಿಗ್ಗೆ ಮತ್ತೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಬೆಳಿಗ್ಗೆ 7.49ಕ್ಕೆ ಭೂಮಿ ಕಂಪಿಸಿದ್ದು, ವಿಜಯಪುರ ತಾಲ್ಲೂಕಿನ ಭೂತ್ನಾಳ್ ತಾಂಡಾದಿಂದ ವಾಯುವ್ಯಕ್ಕೆ ಸುಮಾರು 3.6 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಭೂಕಂಪವು ಅಲ್ಪಪ್ರಮಾಣದಲ್ಲಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪದ ಕೇಂದ್ರಬಿಂದುವಿನಿಂದ 50-60 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಬಹುದು ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಅಂತಹ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ತೀವ್ರತೆ ಕಡಿಮೆಯಾಗಿದೆ. ಆದರೂ, ಸ್ಥಳೀಯವಾಗಿ ಕಂಪನದ ಅನುಭವವಾಗಬಹುದು. ಹೀಗಾಗಿ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅದು ಹೇಳಿದೆ.
ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಕೆಲವು ದಿನಗಳಿಂದ ಭೂಕಂಪಗಳು ಸಂಭವಿಸುತ್ತಿವೆ.
Advertisement