

ಹಾಸನ: ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಹಂಚಿಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸೋಮವಾರ ಹೇಳಿದ್ದಾರೆ.
ಸಂಕೋಡನಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ ಮಹಾಭಿಯಾನ (ಪಿಎಂ ಕುಸುಮ್) ಯೋಜನೆಯಡಿ ಸೌರಶಕ್ತಿ ಉದ್ಯಾನವನಕ್ಕಾಗಿ ಗೊತ್ತುಪಡಿಸಿದ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಸಚಿವರು ಮಾತನಾಡಿದರು.
ರಾಜ್ಯಾದ್ಯಂತ ವಿವಿಧ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ 2400 ಮೆಗಾವ್ಯಾಟ್ ಸೌರಶಕ್ತಿ ಉತ್ಪಾದಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಉಪಕ್ರಮವನ್ನು ಸಕಾಲಿಕವಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಇದೇ ವೇಳೆ ಪರಿಣಾಮಕಾರಿ ನಿರ್ವಹಣೆ ಮತ್ತು ವಿತರಣಾ ನಷ್ಟವನ್ನು ತಗ್ಗಿಸಲು ಇಂಧನ ಇಲಾಖೆಯು 100 ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲು ಯೋಜಿಸಿದೆ ಎಂದು ಸಚಿವರು ತಿಳಿಸಿದರು.
ಬಳಿಕ ಸೌರಶಕ್ತಿಯ ಮಹತ್ವವನ್ನು ಎತ್ತಿ ತೋರಿಸಿದ ಸಚಿವರು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೊಸ ಸೌರಶಕ್ತಿ ಸೌಲಭ್ಯಗಳ ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಪಂಪ್ ಸೆಟ್‌ಗಳಿಗೆ ಏಳು ಗಂಟೆಗಳ ನಿರಂತರ ಗುಣಮಟ್ಟದ ವಿದ್ಯುತ್ ಒದಗಿಸಲು ಸರ್ಕಾರ ಬದ್ಧವಾಗಿದೆ. ಅರಸೀಕೆರೆ ತಾಲ್ಲೂಕಿನ ಸಂಕೋಡನಹಳ್ಳಿಯಲ್ಲಿ ಹೊಸ ಸೌರಶಕ್ತಿ ಪಾರ್ಕ್ ನಿರ್ಮಾಣವಾಗಲಿದೆ ಎಂದರು.
ಬಳಿಕ ವಿರೋಧ ಪಕ್ಷಗಳ ಆರೋಪಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿಪಕ್ಷಗಳ ಆರೋಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ, ಏಕೆಂದರೆ ಅವರು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆಂದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಅವರು, ಬಿಜೆಪಿ ಕೂಡ ಈ ಹಿಂದೆ ಉಕ್ಕಿನ ಸೇತುವೆ ಯೋಜನೆಯನ್ನು ಪ್ರಸ್ತಾಪಿಸಿತ್ತು. ಅದೇ ರೀತಿ ನಾವು ಸುರಂಗ ಯೋಜನೆಯನ್ನು ಪ್ರಸ್ತಾಪಿಸಿದ್ದೇವೆಂದು ಹೇಳಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಸರಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ಸಾಕಷ್ಟು ಹಣವನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
Advertisement